ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರಿಗೆ ₹79 ಕೋಟಿ ಪರಿಹಾರ: ವರದಿಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸೂಚನೆ

ಮೂರು ವಾರಗಳಲ್ಲಿ ವರದಿಗೆ ಸೂಚನೆ
Last Updated 7 ನವೆಂಬರ್ 2022, 20:52 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ಅನರ್ಹರಿಗೆ 54 ಎಕರೆ ಭೂಮಿಯನ್ನು ಖಾತೆ ಮಾಡಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹79.28 ಕೋಟಿ ಪರಿಹಾರವನ್ನು ನಿಯಮಬಾಹಿರವಾಗಿ ಪಾವತಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಪ್ರಗತಿಯ ವರದಿ ನೀಡಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(ಪಿಎಸಿ) ಅಧಿಕಾರಿಗಳಿಗೆ ತಾಕೀತು ಮಾಡಿದೆ.

ಶಾಸಕ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯ ಸಮಿತಿ ಸಭೆಯ ಸೋಮವಾರ ನಡೆಯಿತು. ಈ ಪ್ರಕರಣದಲ್ಲಿ ಆರೋಪಿಗಳ ಆರೋಪ ಸಾಬೀತಾಗಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಥವಾ ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಆಸಕ್ತಿ ವಹಿಸದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಮೂರು ಸಭೆಗಳಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಆ ಬಳಿಕವೇ ಪ್ರಕರಣ ದಾಖಲಾಗಿ ತನಿಖೆಗೆ ಚಾಲನೆ ಸಿಕ್ಕಿದೆ. ಆದರೆ ನಿರೀಕ್ಷಿತ ಪ್ರಗತಿ ಆಗಿಲ್ಲ. ಕೇಳಿದರೆ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವುದು ನಿಶ್ಚಿತ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಏನಿದು ಪ್ರಕರಣ: ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಅಡಕ್ಕನಹಳ್ಳಿ, ತಾಂಡವಪುರ ಹಾಗೂ ಇಮ್ಮಾವು ಗ್ರಾಮಗಳಲ್ಲಿ 1,123 ಎಕರೆ ಸ್ವಾಧೀನಕ್ಕೆ ಕೆಐಎಡಿಬಿ 2007ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಬಳಿಕ 2008 ರಲ್ಲಿ 1,138 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ಇಮ್ಮಾವು ಗ್ರಾಮದ 1,015 ಎಕರೆ ಸಹ ಸೇರಿದೆ.

ಭೂಸ್ವಾಧೀನಪಡಿಸಿಕೊಂಡ ಜಮೀನಿನ ಪೈಕಿ ಇಮ್ಮಾವು ಗ್ರಾಮದ ಹೊಸ ಸರ್ವೆ ಸಂಖ್ಯೆ 582, 583, 584, 585, 586, 587 ರ ಜಮೀನಿಗೆ ಕೆಐಎಡಿಬಿ ಮೈಸೂರು ವಲಯ ಕಚೇರಿಯ ವಿಶೇಷ ಭೂಸ್ವಾಧೀನಾಧಿಕಾರಿ (ಈಗ ನಿವೃತ್ತ) ಎಚ್.ಕೆ.ಕೃಷ್ಣಮೂರ್ತಿ ₹79.28 ಕೋಟಿ ಪರಿಹಾರ ಪಾವತಿಸಿದ್ದಾರೆ.

‘ಎಲ್ಲ ಆರೋಪಗಳು ಸಾಬೀತಾಗಿವೆ. ಸತ್ತವರ ಹೆಸರಲ್ಲಿ ಪಹಣಿ ಸೃಷ್ಟಿ ಮಾಡಿದ್ದೂ ಅಲ್ಲದೇ, ನಕಲಿ ವಾರಸುದಾರರನ್ನು ಸೃಷ್ಟಿಸಿ ಅವರಿಗೆ ಅಕ್ರಮವಾಗಿ ಪರಿಹಾರವನ್ನೂ ವಿತರಿಸಲಾಗಿದೆ. ಕಂದಾಯ ಇಲಾಖೆ ಮತ್ತು ಕೈಗಾರಿಕಾ ಇಲಾಖೆಗಳು ಸೇರಿ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಆದರೆ ಯಾರೂ ಕೆಲಸ ಮಾಡದೇ ಇರುವ ಬಗ್ಗೆ ಸಭೆಯಲ್ಲಿ ಚರ್ಚೆ ಆಯಿತು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯೂ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಕೃಷ್ಣಬೈರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT