ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಸಮಸ್ಯೆ: ಇದೇ 28ರಂದು ಬಿಜೆಪಿ ಪ್ರತಿಭಟನೆ

ಪ್ರತಿ ವಾರ್ಡ್‌ನಲ್ಲೂ ಹೋರಾಟ: ಬಿ.ವೈ.ವಿಜಯೇಂದ್ರ
Published 24 ಮೇ 2024, 16:22 IST
Last Updated 24 ಮೇ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ಸಮಸ್ಯೆಗಳು ಮತ್ತು ಅವ್ಯವಸ್ಥೆಗಳ ವಿರುದ್ಧ ಇದೇ 28ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬೆಂಗಳೂರು ನಗರದ ಸಮಸ್ಯೆಗಳ ಕುರಿತು ನಗರದ ಶಾಸಕರು, ಮಾಜಿ ಶಾಸಕರು ಮತ್ತು ಮಾಜಿ ಕಾರ್ಪೊರೇಟರ್‌ಗಳ ಜತೆಗಿನ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.

‘ನಗರದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರತಿ ವಾರ್ಡಿನಲ್ಲಿ ಬಿಜೆಪಿ ವತಿಯಿಂದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ಇದು ನಾಮಕಾವಸ್ತೆ ಹೋರಾಟವಲ್ಲ. ಸಮಸ್ಯೆಗಳಿಗೆ ಪರಿಹಾರ ಮತ್ತು ಹೋರಾಟಕ್ಕೆ ಜಯ ಸಿಗಬೇಕು’ ಎಂದು ಅವರು ವಿವರಿಸಿದರು.

‘ನಗರದಲ್ಲಿ ಆಗುತ್ತಿರುವ ಅವ್ಯವಸ್ಥೆಗಳ ಬಗ್ಗೆ ಚರ್ಚಿಸಿದ್ದೇವೆ. ಕೇವಲ ಎರಡು ದಿನಗಳು ಮಳೆ ಬಂದಾಗ ರಸ್ತೆಗಳು ವಾಹನ ಓಡಾಡದಂತೆ ಬ್ಲಾಕ್‌ ಆಗಿದ್ದವು. ಈ ನಗರದ ಜನ ಅತಿ ಹೆಚ್ಚು ತೆರಿಗೆ ಪಾವತಿಸುತ್ತಾರೆ. ಆದರೆ, ಹೊಸ ಸರ್ಕಾರ ಬಂದ ಬಳಿಕ ಒಂದು ವರ್ಷದಲ್ಲಿ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ’ ಎಂದರು.‌

‘ರಾಜ್ಯ ಸರ್ಕಾರ ಆಸ್ತಿ ತೆರಿಗೆ, ಮೋಟಾರು ವಾಹನ ತೆರಿಗೆ ಸೇರಿ ಎಲ್ಲ ರೀತಿಯ ತೆರಿಗೆಗಳನ್ನು ಹೆಚ್ಚಿಸಿದೆ. ಆದರೆ, ಜನತೆಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ. ಕಸ ವಿಲೇವಾರಿಯೂ ಸರಿಯಾಗಿ ಆಗುತ್ತಿಲ್ಲ. ಅತಿ ಹೆಚ್ಚು ಸಚಿವರಿದ್ದರೂ ನಗರದ ಅಭಿವೃದ್ಧಿ ಕುರಿತು ಯಾರೂ ಕೂಡ ಚಿಂತನೆ ಮಾಡದೇ ಇರುವುದು ದುರಂತ’ ಎಂದು ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ‘ಮಳೆ ಬಂದಾಗ ಮುಖ್ಯಮಂತ್ರಿಯವರ ಹೋಗಿ ಫೋಟೊ ಷೋ ಮಾಡುವುದು ಬಿಟ್ಟರೆ ಬೇರೇನೂ ಕೆಲಸ ಆಗುತ್ತಿಲ್ಲ. ಕಮಿಷನರ್ ಅವರು ಮಳೆಗೆ ಸಂಬಂಧಿಸಿ ಎಲ್ಲ ಸಿದ್ಧತೆ ಮಾಡಿರುವುದಾಗಿ ಒಂದು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದರು. ಪಾಲಿಕೆ ಎಲ್ಲ ಸಿದ್ಧತೆ ಮಾಡಿದ್ದರೆ ಮುಖ್ಯಮಂತ್ರಿ ಸ್ಥಳ ಭೇಟಿ ಮಾಡುವ ಪ್ರಮೇಯ ಯಾಕೆ ಬಂತು’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಒಂದು ವರ್ಷದಲ್ಲಿ ₹7,000 ಕೋಟಿ ವಿಶೇಷ ಅನುದಾನ ನೀಡಿದ್ದರು. ಬಸವರಾಜ ಬೊಮ್ಮಾಯಿ ಅವರು ₹6,700 ಕೋಟಿ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್‌ನವರು ಅವರ ಯೋಗ್ಯತೆಗೆ ಎಷ್ಟು ಬಿಡುಗಡೆ ಮಾಡಿದ್ದಾರೆಂದು ಹೇಳಲಿ’ ಎಂದು ಸವಾಲು ಹಾಕಿದರು.

ಮಾದಕವಸ್ತು ಮಾರಾಟ ಸಾಗಣೆ ಮತ್ತು ಸೇವನೆ ತಡೆಗೆ ನಮ್ಮ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಬಿಜೆಪಿಯ ‘ಉಡ್ತಾ ಬೆಂಗಳೂರು’ ಆರೋಪದಲ್ಲಿ ಹುರುಳಿಲ್ಲ
ಜಿ. ಪರಮೇಶ್ವರ ಗೃಹ ಸಚಿವ

‘ಉಡ್ತಾ ಬೆಂಗಳೂರು’ ಆಗುತ್ತಿದೆ: ವಿಜಯೇಂದ್ರ

‘ಸಿಲಿಕಾನ್‌ ವ್ಯಾಲಿ ಗಾರ್ಡನ್‌ ಸಿಟಿ ಎಂದು ಹೆಸರು ಮಾಡಿದ್ದ ಬೆಂಗಳೂರು ಈಗ ‘ಉಡ್ತಾ ಬೆಂಗಳೂರು’ ಆಗಿದೆ. ಮಾದಕ ದ್ರವ್ಯ ಚಟುವಟಿಕೆ ಮಿತಿ ಮೀರಿದೆ’ ಎಂದು ಬಿ.ವೈ.ವಿಜಯೇಂದ್ರ ‘ಎಕ್ಸ್‌’ ಮೂಲಕ ತಿಳಿಸಿದ್ದಾರೆ. ‘ಕರ್ನಾಟಕದ ಸ್ಥಿತಿ ಅದರಲ್ಲೂ ಬೆಂಗಳೂರು ನಗರ ಮಾದಕದ್ರವ್ಯ ವ್ಯಸನಿಗಳು ಮತ್ತು ರೇವ್‌ ಪಾರ್ಟಿಗಳನ್ನು ಮಾಡುವವರ ಸ್ವರ್ಗವಾಗಿ ಮಾರ್ಪಾಡಾಗಿರುವುದು ಆತಂಕದ ಮತ್ತು ಬೇಸರದ ಸಂಗತಿ’ ಎಂದು ಅವರು ಹೇಳಿದ್ದಾರೆ. ‘ಹೊರ ರಾಜ್ಯದವರು ಬೆಂಗಳೂರಿಗೆ ಬಂದು ಇಲ್ಲಿ ರೇವ್‌ ಪಾರ್ಟಿಗಳನ್ನು ಮಾಡುವುದು ಸುರಕ್ಷಿತ ಎಂದು ಭಾವಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರ ಬೇಜವಾಬ್ದಾರಿ ಧೋರಣೆಯೇ ಕಾರಣ. ಕಾಂಗ್ರೆಸ್‌ ಪಕ್ಷ ಇಂತಹ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆಯೆ ಎಂಬ ಸಂದೇಹವೂ ಉಂಟಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT