ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಮುಖ್ಯ ಎಂಜಿನಿಯರ್ಸ್‌ ಅತಂತ್ರ!

ಲೋಕೋಪಯೋಗಿ ಸಚಿವ ರೇವಣ್ಣ– ಸಚಿವ ಡಿಕೆಶಿ ಮುಸುಕಿನ ಗುದ್ದಾಟ?
Last Updated 15 ಜುಲೈ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ (ಸಿ.ಇ) ಹುದ್ದೆಗಳಿಗೆ ಬಡ್ತಿ ಪಡೆದ 25 ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳ ಪೈಕಿ 20 ಎಂಜಿನಿಯರ್‌ಗಳು ಒಂದು ತಿಂಗಳಿನಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅದರಲ್ಲೂ ಇಬ್ಬರು ಕೆಲಸ ಇಲ್ಲದೆ
ಖಾಲಿ ಕುಳಿತಿದ್ದಾರೆ!

ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ನಡುವಿನ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣ ಎಂದು ಇಲಾಖೆ ಅಧಿಕಾರಿಗಳು ಆರೋಪಿಸುತ್ತಾರೆ.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ವೃಂದದ 51 ಅಧಿಕಾರಿ
ಗಳಿಗೆ ಜೂನ್‌ 8ರಂದು ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಲಾಗಿತ್ತು. 25 ಅಧಿಕಾರಿಗಳನ್ನು ಜಲಸಂಪನ್ಮೂಲ ಇಲಾಖೆಯ ವಿವಿಧ ಹುದ್ದೆಗಳಿಗೆ ನಿಯುಕ್ತಿಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಅಧಿಸೂಚನೆ ಹೊರಡಿಸಿತ್ತು.

‘ಪರಿಸ್ಥಿತಿ ನಿಭಾಯಿಸಲು ಹೊಸಬರಿಗೆ ಕಷ್ಟ’

‘ರಾಜ್ಯ ಎಲ್ಲ ಕಡೆ ಉತ್ತಮ ಮಳೆ ಆಗುತ್ತಿರುವುದರಿಂದ ಹಲವೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳು ತುಂಬಿವೆ. ಪ್ರವಾಹ ನಿರ್ವಹಣೆ ಸೇರಿದಂತೆ ಒಟ್ಟು ಪರಿಸ್ಥಿತಿಯನ್ನು ನಿಭಾಯಿಸಲು ಹೊಸಬರಿಗೆ ಕಷ್ಟ ಎಂಬ ಕಾರಣಕ್ಕೆ ಬಡ್ತಿ ಪಡೆದ ಮುಖ್ಯ ಎಂಜಿನಿಯರ್‌ಗಳಿಗೆ ಸ್ಥಳ ನಿಯುಕ್ತಿ ಮಾಡಿಲ್ಲ’ ಎಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸ್ಥಳ ನಿಯೋಜನೆ ಸದ್ಯ ಬೇಡ ಎಂದೂ ಕೆಲವರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಆಡಳಿತಾತ್ಮಕ ಕಾರಣಗಳಿಗೂ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

15 ಮುಖ್ಯ ಎಂಜಿನಿಯರ್‌ ಹುದ್ದೆ ಖಾಲಿ

ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ, ಅಂತರರಾಜ್ಯ ನದಿ ಸಮಸ್ಯೆ, ಕೃಷ್ಣಾ ಭಾಗ್ಯ ಜಲ ನಿಗಮದ ಕಾಲುವೆ ವಲಯ–1 (ಭೀಮರಾಯನಗುಡಿ), ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ನೀರಾವರಿ ದಕ್ಷಿಣ ವಲಯ (ಮೈಸೂರು) ಹಾಗೂ ಅಣೆಕಟ್ಟು ವಲಯ (ಗೊರೂರು), ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯ ನೀರಾವರಿ ಉತ್ತರ ವಲಯ (ಬೆಳಗಾವಿ) ಹಾಗೂ ಐ.ಪಿ.ಜೆಡ್‌ ವಲಯ (ಕಲಬುರ್ಗಿ), ಕರ್ನಾಟಕ ಲೋಕಾಯುಕ್ತ, ಸಂಪರ್ಕ ಮತ್ತು ಕಟ್ಟಡ (ಉತ್ತರ, ಧಾರವಾಡ), ಗುಣ ಭರವಸೆ ವಲಯ (ಬೆಂಗಳೂರು) ಸೇರಿ 15 ಕಡೆಗಳಲ್ಲಿ ಮುಖ್ಯ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಆದರೂ ಅಧಿಕಾರಿಗಳ ಸ್ಥಳ ನಿಯೋಜನೆಗೆ ಮೀನಮೇಷ ಎಣಿಸುತ್ತಿರುವುದು ಅಧಿಕಾರಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ನಾಲ್ವರು ಮುಖ್ಯ ಎಂಜಿನಿಯರ್‌ಗಳಿಗೆ ‘ಡಬಲ್‌‘ ಹುದ್ದೆ!

ಮುಖ್ಯ ಎಂಜಿನಿಯರ್‌ಗಳಾದ ಜೈಪ್ರಕಾಶ್‌ (ವ್ಯವಸ್ಥಾಪಕ ನಿರ್ದೇಶಕರು, ವಿಶ್ವೇಶ್ವರಯ್ಯ ಜಲ ನಿಗಮ, ಹೆಚ್ಚುವರಿಯಾಗಿ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ), ಕೃಷ್ಣೇಗೌಡ (ಮುಖ್ಯ ಎಂಜಿನಿಯರ್‌, ಕೃಷ್ಣ ಭಾಗ್ಯ ಜಲ ನಿಗಮದಡಿ ಬರುವ ಪಾಲನೆ ಹಾಗೂ ಪೋಷಣೆ ವಲಯ ನಾರಾಯಣಪುರ ಮತ್ತು ಕಾಲುವೆ ವಲಯ, ಭೀಮರಾಯನಗುಡಿ), ಗಣೇಶ್‌ (ವ್ಯವಸ್ಥಾಪಕ ನಿರ್ದೇಶಕರು ಕೆಆರ್‌ಡಿಸಿಎಲ್‌ ಮತ್ತು ಮುಖ್ಯ ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ) ‘ಡಬಲ್‌’ ಹುದ್ದೆಯಲ್ಲಿರುವುದೂ ಸ್ಥಳ ನಿಯೋಜನೆಗಾಗಿ ಕಾಯುತ್ತಿರುವ ಅಧಿಕಾರಿಗಳ ಅತೃಪ್ತಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT