ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ರಜೆ: ಪ್ರವಾಸಿ ತಾಣಗಳಲ್ಲಿ ಸಂಭ್ರಮ

ಉತ್ತರ ಕನ್ನಡ: ದುಬಾರಿಯಾದ ಅತಿಥಿಗೃಹ, ಬಾದಾಮಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ
Published 26 ಡಿಸೆಂಬರ್ 2023, 6:26 IST
Last Updated 26 ಡಿಸೆಂಬರ್ 2023, 6:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿತ್ತೂರು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳಲ್ಲಿ ಸೋಮವಾರ ಜನದಟ್ಟಣೆ ಕಂಡುಬಂದಿತು. ಪ್ರವಾಸಿಗರ ನೆಚ್ಚಿನ ತಾಣಗಳಾದ ಹಂಪಿ, ಬಾದಾಮಿ, ವಿಜಯಪುರ, ಗೋಕರ್ಣ, ಮುರ್ಡೇಶ್ವರದ ಕಡಲತೀರಗಳು ಪ್ರವಾಸಿಗರಿಂದ ತುಂಬಿ ತುಳುಕಾಡುತ್ತಿವೆ.

ಅತಿಥಿಗೃಹಗಳ ಕೊಠಡಿಗಳು ‘ದುಬಾರಿ’ ಆಗಿದ್ದು, ದುಪ್ಪಟ್ಟು ದರ ಪಡೆಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮುರುಡೇಶ್ವರಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು. ಗೋವಾಕ್ಕೆ ತೆರಳುವವರೂ ಅಲ್ಲಿ ಕೊಠಡಿ ಸಿಗದೆ ಕಾರವಾರದಲ್ಲಿ ತಂಗಿದ್ದಾರೆ.

₹1 ಸಾವಿರಕ್ಕೆ ಸಿಗುತ್ತಿದ್ದ ಕೊಠಡಿಗೆ ₹3 ಸಾವಿರ, ₹2 ಸಾವಿರಕ್ಕೆ ದೊರೆಯುತ್ತಿದ್ದ ಕೊಠಡಿಗೆ ಈಗ ₹6 ಸಾವಿರ, ₹3 ಸಾವಿರದ ಕೊಠಡಿಗೆ ₹8 ಸಾವಿರ ನಿಗದಿಸಲಾಗಿದೆ. ತಿಂಡಿ, ತಿನಿಸುಗಳ ದರಗಳೂ ಹೆಚ್ಚಿವೆ.

ಹಂಪಿಯಲ್ಲಿ ದಟ್ಟಣೆ: ಹಂಪಿ, ಹೊಸಪೇಟೆಯಲ್ಲಿ ಲಾಡ್ಜ್‌ಗಳೆಲ್ಲ ಭರ್ತಿಯಾಗಿದ್ದಲ್ಲದೆ, ದರ ದುಪ್ಪಟ್ಟಾ ಗಿದೆ. ಪ್ರವಾಸಿಗರು, ಶೈಕ್ಷಣಿಕ ಪ್ರವಾಸದ ಮಕ್ಕಳು, ಹನುಮ ಮಾಲಾ ಧಾರಿಗಳಿಂದ ಹಂಪಿಯಲ್ಲಿ ದಟ್ಟಣೆ ತೀವ್ರವಾಗಿದೆ. ಭಾನುವಾರ ಹಂಪಿಗೆ 80 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದರು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧಿಕಾರಿಗಳು ತಿಳಿಸಿದರು.

ಹೊಸಪೇಟೆಯಲ್ಲಿ ಸಾಮಾನ್ಯ ಬಜೆಟ್‌ನ ಲಾಡ್ಜ್‌ಗಳಲ್ಲಿ 1,400ರಷ್ಟು ಕೊಠಡಿಗಳಿದ್ದು, ಬಹುತೇಕ ಬುಕ್‌ ಆಗಿವೆ. ಹವಾನಿಯಂತ್ರಣ ರಹಿತ ಕೊಠಡಿಗಳ ದರ ಸಾಮಾನ್ಯ ದಿನಗಳಲ್ಲಿ ₹1,200ರಿಂದ 1,500 ಇದ್ದರೆ, ಈ ವಾರ ಅವುಗಳ ದರ ದುಪ್ಪಟ್ಟಾಗಿದೆ. ಹವಾನಿಯಂತ್ರಣ ಸಹಿತ ಕೊಠಡಿಗಳ ದರ ಸಾಮಾನ್ಯ ದಿನಗಳಲ್ಲಿ ₹1,800 ರಿಂದ ₹2,000 ಇದ್ದು, ಈ ವಾರ ದುಪ್ಪಟ್ಟಾಗಿದೆ.

ವಾಹನ ಸಂಚಾರ ಅಸ್ತವ್ಯಸ್ತ: ಪ್ರವಾಸಿಗರಿಂದ ಸೋಮವಾರ ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬಂತು. ಪ್ರವಾಸಿಗರ ವಾಹನಗಳಿಂದ ಬಾಗಲಕೋಟೆಯ ಬಾದಾಮಿಯ ಮುಖ್ಯರಸ್ತೆ ವೀರಪುಲಿಕೇಶಿ ವೃತ್ತ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಒಂದು ಕಿಲೊಮೀಟರ್‌ವರೆಗೆ ವಾಹನಗಳು ಗಂಟೆಗಟ್ಟಲೇ ಸಂಚಾರ ಸ್ಥಗಿತವಾಗಿದ್ದವು.

‘ಹಂಪಿ ಬೈ ನೈಟ್‌’ ಆಕರ್ಷಣೆ

ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಪ್ರತಿದಿನ ರಾತ್ರಿ 7ರಿಂದ 8.15ರವರೆಗೆ ‘ಹಂಪಿ ಬೈ ನೈಟ್‌’ ಎಂಬ ಧ್ವನಿ, ಬೆಳಕಿನ ಪ್ರದರ್ಶನ ನಡೆಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಂಪಿಯ ಇತಿಹಾಸ, ಸಂಸ್ಕೃತಿ ಪರಿಚಯಿಸುವುದೇ ‘ಹಂಪಿ ಬೈ ನೈಟ್’ ಕಾರ್ಯಕ್ರಮದ ಉದ್ದೇಶ. ಹಂಪಿಗೆ ಹೆಚ್ಚು ಜನರು ಬರಲು ಇದು ಕೂಡ ಪ್ರಮುಖ ಕಾರಣವಾಗಿದೆ.

ಚಿಕ್ಕಮಗಳೂರಿಗೆ ಪ್ರವಾಸಿಗರ ಲಗ್ಗೆ ವಾಹನ ದಟ್ಟಣೆ

ಚಿಕ್ಕಮಗಳೂರು: ಪ್ರವಾಸಿಗರ ದಂಡೇ ಚಿಕ್ಕಮಗಳೂರಿಗೆ ಲಗ್ಗೆ ಇಟ್ಟಿತ್ತು. ಪ್ರವಾಸಿ ತಾಣಗಳು, ಹೋಮ್ ಸ್ಟೇ, ರೆಸಾರ್ಟ್‌ ಮತ್ತು ವಸತಿ ಗೃಹಗಳು ಸಂಪೂರ್ಣ ಭರ್ತಿಯಾಗಿವೆ.

ದತ್ತ ಜಯಂತಿ ನಡೆಯುತ್ತಿರುವುದರಿಂದ ಮುಳ್ಳಯ್ಯನಗಿರಿ ಸುತ್ತಮತ್ತಲ ಗಿರಿಶ್ರೇಣಿಗೆ ಪ್ರವಾಸಿಗರಿಗೆ ನಿರ್ಬಂಧವಿತ್ತು. ಕಳಸ, ಶೃಂಗೇರಿ, ಹೊರನಾಡು, ಕೆಮ್ಮಣ್ಣುಗುಂಡಿ, ಕುದುರೆಮುಖ, ಮೂಡಿಗೆರೆ ತಾಲ್ಲೂಕಿನ ರಾಣಿಝರಿ, ಎತ್ತಿನಭುಜದಲ್ಲಿ ದಟ್ಟಣೆ ಹೆಚ್ಚಿತ್ತು.

ಹೊರನಾಡು ದೇವಸ್ಥಾನ, ಶೃಂಗೇರಿ ಶಾರದಾಪೀಠದಲ್ಲಿ ಭಕ್ತರ ಸಾಲು ಕಂಡುಬಂದಿತು. ವಾಹನ ನಿಲುಗಡೆ ತಾಣದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕುದುರೆಮುಖ ಮತ್ತು ನೇತ್ರಾವತಿ ಚಾರಣ ಕೂಡ ಸಾಹಸಪ್ರಿಯ ಪ್ರವಾಸಿಗರಿಂದ ತುಂಬಿವೆ.‌

ಹೋಮ್‌ಸ್ಟೇಗಳು, ರೆಸಾರ್ಟ್‌ಗಳು, ಹೋಟೆಲ್‌ಗಳಲ್ಲಿ ದುಪ್ಪಟ್ಟು ದರ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ವಸತಿ ಗೃಹಗಳಲ್ಲಿ ಸಾಮಾನ್ಯವಾಗಿ ₹2 ಸಾವಿರ ಇದ್ದ ಕೊಠಡಿ ದರ ₹3 ಸಾವಿರದಿಂದ ₹4 ಸಾವಿರ ತನಕ ನಿಗದಿಯಾಗಿದೆ.

ಶಿವಮೊಗ್ಗ: ದಾಖಲೆ ಪ್ರವಾಸಿಗರು

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ ಹಾಗೂ ಸಕ್ರೆಬೈಲು ಆನೆ ಶಿಬಿರಕ್ಕೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಇಟ್ಟರು. ಎರಡೂ ಕಡೆ ಒಂದೇ ದಿನ ದಾಖಲೆಯ ಆದಾಯ ಸಂಗ್ರಹವಾಗಿದೆ.

‘ಹುಲಿ-ಸಿಂಹ ಧಾಮಕ್ಕೆ ಭಾನುವಾರ 4,200 ಮಂದಿ ಭೇಟಿ ನೀಡಿದ್ದು, ₹7.02 ಲಕ್ಷ ಆದಾಯ ಸಂಗ್ರಹವಾಗಿದೆ. ಮೃಗಾಲಯದ 35 ವರ್ಷಗಳ ಇತಿಹಾಸದಲ್ಲಿ ಒಂದೇ ದಿನ ಸಂಗ್ರಹವಾದ ಅತಿ ಹೆಚ್ಚಿನ ಆದಾಯ ಇದಾಗಿದೆ. ಈ ವರ್ಷದ ಜನವರಿ 1ರಂದು ₹ 6.43 ಲಕ್ಷ ಆದಾಯ ಸಂಗ್ರಹವಾಗಿತ್ತು’ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಚಂದ್ರ ಹರ್ಷ ವ್ಯಕ್ತಪಡಿಸಿದರು. ಹುಲಿ-ಸಿಂಹ ಧಾಮಕ್ಕೆ ಸೋಮವಾರ 3,872 ಮಂದಿ ಭೇಟಿ ನೀಡಿದ್ದು, ₹ 6.52 ಲಕ್ಷ ಆದಾಯ ಸಂಗ್ರಹವಾಗಿದೆ.

ಆನೆ ಬಿಡಾರಕ್ಕೂ ಲಗ್ಗೆ: ಇಲ್ಲಿನ ತುಂಗಾ ಜಲಾಶಯದ ಹಿನ್ನೀರ ದಂಡೆಯಲ್ಲಿರುವ ಸಕ್ರೆಬೈಲು ಆನೆ ಬಿಡಾರಕ್ಕೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಆನೆ ಸವಾರಿ, ದೋಣಿ ವಿಹಾರ ಮಾಡಿ ಖುಷಿಪಟ್ಟರು.

‘ಆನೆ ಬಿಡಾರಕ್ಕೆ ಸೋಮವಾರ 2,257 ಮಂದಿ ಭೇಟಿ ನೀಡಿದ್ದಾರೆ. ₹1.63 ಲಕ್ಷ ಆದಾಯ ಸಂಗ್ರಹವಾಗಿದೆ. ಇದೇ ಮೊದಲ ಸಲ ಶಿಬಿರದ ಆದಾಯ ₹ 1.5 ಲಕ್ಷ ದಾಟಿದ್ದು, ದಾಖಲೆಯಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ವಿನಯ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT