ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಘೋಷವಾಕ್ಯ ಬದಲಾವಣೆ: ಉಭಯ ಸದನಗಳಲ್ಲಿ ಗದ್ದಲ

ರಾಷ್ಟ್ರಕವಿ ಕುವೆಂಪುಗೆ ಸರ್ಕಾರದಿಂದ ಅಪಮಾನ– ಬಿಜೆಪಿ ಆಕ್ರೋಶ
Published 19 ಫೆಬ್ರುವರಿ 2024, 23:30 IST
Last Updated 19 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಅಡಿಯಲ್ಲಿರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ' ಎನ್ನುವ ಘೋಷ ವಾಕ್ಯವನ್ನು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಿಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೀಡಿರುವ ಸೂಚನೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.‌

ಈ ಸೂಚನೆಯನ್ನು ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ‌ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದರು.

ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ, ಬಿಜೆಪಿಯ ಎನ್‌. ರವಿಕುಮಾರ್, ‘ಕುವೆಂಪು ಅವರ ಸಾಲಿನ ಪ್ರೇರೇಪಣೆ ಪಡೆದು ಈ ಸಾಲು ಹಾಕಲಾಗಿತ್ತು. ಅದನ್ನು  ಬದಲಿಸಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ. ಈ ವಿಷಯದ ಕುರಿತು ಚರ್ಚೆಗೆ ಅವಕಾಶ ನೀಡಬೇಕು’ ಎಂದು ಪಟ್ಟು ಹಿಡಿದರು. ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ಸದಸ್ಯರು ಅವರಿಗೆ ದನಿಗೂಡಿಸಿದರು.

‘ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ’ ಎಂದ ಸಭಾನಾಯಕ ಎನ್‌.ಎಸ್‌. ಬೋಸರಾಜ್, ಸಂಬಂಧಿಸಿದ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡ, ‘ಚರ್ಚೆಗೆ ಅವಕಾಶವಿಲ್ಲ. ಬೇರೆ ರೂಪದಲ್ಲಿ ವಿಷಯ ಮಂಡಿಸಿ’ ಎಂದು ಸಲಹೆ ನೀಡಿದರು. ಅದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂಭಾಗಕ್ಕೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆರೋಪ– ಪ್ರತ್ಯಾರೋಪ, ವಾಗ್ವಾದ ಮುಂದುವರಿದಾಗ ತೇಜಸ್ವಿನಿಗೌಡ ಕಲಾಪವನ್ನು ಐದು ನಿಮಿಷ ಕಾಲ ಮುಂದೂಡಿಕೆ ಮಾಡಿದರು. ಕಲಾಪ ಮತ್ತೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಕುವೆಂಪು ಅವರಿಗೆ ಅವಮಾನ: ವಿಧಾನ ಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ  ಬಿ.ವೈ. ವಿಜಯೇಂದ್ರ, ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ’ ಎಂಬ ಕುವೆಂಪುರವರ ರಚನೆಯನ್ನು ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಧ್ಯೇಯ ವಾಕ್ಯವಾಗಿ ಬರೆಯಲಾಗಿತ್ತು. ಈಗ ಅದನ್ನು, ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಸಲು ಸೂಚಿಸಲಾಗಿದೆ. ಇದು ರಾಷ್ಟ್ರಕವಿ ಕುವೆಂಪು ಅವರಿಗೆ ಈ ಸರ್ಕಾರ ಮಾಡುತ್ತಿರುವ ಅವಮಾನ’ ಎಂದರು.

ಸಮಾಜ ಕಲ್ಯಾಣ ಸಚಿವರಿಂದ ಮಂಗಳವಾರ ಉತ್ತರ ಕೊಡಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸರ್ಕಾರದ ಪರವಾಗಿ ಭರವಸೆ ನೀಡಿದರು. ಬಿಜೆಪಿ ಸದಸ್ಯರು ಅದನ್ನು ಒಪ್ಪಲಿಲ್ಲ. ಕ್ಷಮೆಯಾಚನೆಗೆ ಒತ್ತಾಯಿಸಿ ಗದ್ದಲ ನಡೆಸಿದರು.

ಆಗ ಸಿಟ್ಟಿಗೆದ್ದ ಕೃಷ್ಣ ಬೈರೇಗೌಡ, ‘ಕುವೆಂಪು ಅವರ ಪಠ್ಯವನ್ನೇ ಕಿತ್ತು ಹಾಕಿದವರು ನೀವು. ಇನ್ನೂ ಏನೇನೋ ಇದೆ. ಅದನ್ನೆಲ್ಲ ಮಾತಾಡಬೇಕಾಗುತ್ತದೆ’ ಎಂದರು.

ಅವರ ಬೆಂಬಲಕ್ಕೆ ನಿಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ‘ಕುವೆಂಪು, ಅಂಬೇಡ್ಕರ್‌, ಫುಲೆ ಎಲ್ಲರಿಗೂ ಅವಮಾನ ಮಾಡಿದ್ದಾರೆ. ಈಗ ಮಾತನಾಡುತ್ತಾರೆ’ ಎಂದು ರೇಗಿದರು.

‘ಏನನ್ನು ಪ್ರಶ್ನೆ ಮಾಡಬೇಕು? ಸರ್ಕಾರ ಇದರ ಪರವಾಗಿ ಇದೆಯಾ?’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT