ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 2 ‘ಗ್ಯಾರಂಟಿ’ ಘೋಷಿಸಿದ ಕಾಂಗ್ರೆಸ್‌

Published 16 ಮಾರ್ಚ್ 2024, 16:08 IST
Last Updated 16 ಮಾರ್ಚ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಸೆಳೆಯಲು ‘ಶ್ರಮಿಕ ನ್ಯಾಯ’ ಹಾಗೂ ‘ಹಿಸ್ಸೇದಾರಿ (ಭಾಗಿದಾರರ) ನ್ಯಾಯ’ ಎಂಬ ಎರಡು ಹೊಸ ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ಶನಿವಾರ ಘೋಷಿಸಿದೆ.

‘ರೈತ ನ್ಯಾಯ’, ‘ಯುವ ನ್ಯಾಯ’ ಮತ್ತು ‘ನಾರಿ ನ್ಯಾಯ’ ಗ್ಯಾರಂಟಿಗಳನ್ನು ಪಕ್ಷವು ಈಗಾಗಲೇ ಘೋಷಿಸಿದೆ.‌

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜೊತೆ ಸುದ್ದಿಗೋಷ್ಠಿಯಲ್ಲಿ ಎರಡು ಹೊಸ ಗ್ಯಾರಂಟಿಗಳನ್ನು ಘೋಷಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಈ ಎಲ್ಲ ಐದು ಗ್ಯಾರಂಟಿಗಳಲ್ಲಿ ತಲಾ ಐದು ಅಂಶಗಳ ಒಟ್ಟು 25 ಅಂಶಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಶ್ರಮಿಕ ನ್ಯಾಯ’– 5 ಭರವಸೆಗಳು

* ನರೇಗಾ ಯೋಜನೆ ಅಡಿಯಲ್ಲಿ ದಿನಗೂಲಿ ಮೊತ್ತ ₹400ಕ್ಕೆ ಏರಿಕೆ

* ಕಾರ್ಮಿಕರಿಗೆ ಆರೋಗ್ಯ ಹಕ್ಕು ಜಾರಿಗೆ ತಂದು ಉಚಿತ ಔಷಧಿ, ಚಿಕಿತ್ಸೆ, ರೋಗಪತ್ತೆ, ಶಸ್ತ್ರಚಿಕಿತ್ಸೆ ಸೌಲಭ್ಯ ನೀಡಲಾಗುತ್ತದೆ

* ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು, ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣ ಹಾಗೂ ನಗರಗಳಲ್ಲಿ ಹವಾಮಾನ ವೈಪರೀತ್ಯ ನಿಯಂತ್ರಣ, ಸಾಮಾಜಿಕ ಸೇವೆಗಳ ಅಂತರ ಕಡಿಮೆ ಮಾಡುವುದು.

* ಅಸಂಘಟಿತ ವಲಯದ ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ವಿಮೆ ಸೇರಿದಂತೆ ಸಾಮಾಜಿಕ ಭದ್ರತೆ

* ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆದು ಕಾರ್ಮಿಕರ ಹಕ್ಕು ಮರುಸ್ಥಾಪನೆ

...............

‘ಹಿಸ್ಸೇದಾರಿ ನ್ಯಾಯ’– 5 ಭರವಸೆಗಳು

* ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ನಡೆಸಿ ದೇಶದ ಸಂಪತ್ತಿನ ಸಮಾನ ಹಂಚಿಕೆ. ಆಡಳಿತದಲ್ಲಿ ಎಲ್ಲ ವರ್ಗದವರ ಪ್ರಾತಿನಿಧ್ಯಕ್ಕೆ ಅವಕಾಶ

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಅಡ್ಡಿಯಾಗಿರುವ ಶೇ‌ 50 ಮಿಸಲಾತಿ ಮಿತಿಯನ್ನು ತಿದ್ದುಪಡಿ ಮೂಲಕ ಏರಿಕೆ

* ಆದಿವಾಸಿಗಳಿಗೆ ಅರಣ್ಯ ಹಕ್ಕು ರಕ್ಷಣೆ. ಬಾಕಿ ಇರುವ ಅರಣ್ಯ ಹಕ್ಕು ಕಾಯ್ದೆಯ ಬೇಡಿಕೆ ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು.

* ಅರಣ್ಯದ ಕಿರು ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಸ್ತರಣೆ. ಅರಣ್ಯ ಸಂರಕ್ಷಣೆ ಕಾಯ್ದೆ ಹೆಸರಿನಲ್ಲಿ ಮಾಡಲಾಗಿರುವ ಬುಡಕಟ್ಟು ವಿರೋಧಿ ತಿದ್ದುಪಡಿಗಳ ರದ್ಧತಿ

* ಆದಿವಾಸಿಗಳಿಗೆ ಸ್ವಯಂ ಆಡಳಿತ ಹಾಗೂ ಸಂಸ್ಕೃತಿ ರಕ್ಷಣೆ ಹಕ್ಕು

‘ಜಾತಿ ಗಣತಿ: ಪಕ್ಷದ ನಿರ್ಣಯ ಪಾಲಿಸಿ’

‘ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್‌ ಯಾರೇ ಇರಲಿ ಪಕ್ಷದ ನಿರ್ಣಯವನ್ನು ಎಲ್ಲರೂ ಪಾಲಿಸಬೇಕು. ಎಐಸಿಸಿ ಮಟ್ಟದಿಂದ ನಾನು ಈ ಮಾತು ಹೇಳುತ್ತಿದ್ದೇನೆ’ ಎಂದು ಖರ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಜಾತಿ ಗಣತಿಗೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಖರ್ಗೆ ಸ್ಪರ್ಧೆ ರಾಜ್ಯ ನಾಯಕರ ತೀರ್ಮಾನ’

‘ನಾನು  ಸ್ಪರ್ಧಿಸಬೇಕೇ ಬೇಡವೇ? ಎನ್ನುವುದನ್ನು ಸ್ಥಳೀಯ ನಾಯಕರು ತೀರ್ಮಾನಿಸುತ್ತಾರೆ.‌ ಆ ಬಗ್ಗೆ ಆಮೇಲೆ ನೋಡೋಣ’ ಎಂದು ಖರ್ಗೆ ಹೇಳಿದರು. ‘ನಿಮ್ಮ ಸ್ಪರ್ಧೆ ಎಲ್ಲಿಂದ?’ ಎಂಬ ಪ್ರಶ್ನೆಗೆ  ರಾಜ್ಯದ ಮಟ್ಟಿಗೆ ರಾಜ್ಯ ನಾಯಕರೇ ನಿರ್ಣಯ ಮಾಡಬೇಕು’ ಎಂದರು. ‘ಈ ಚುನಾವಣೆಯಲ್ಲಿ ನಾವು (ಕಾಂಗ್ರೆಸ್‌) ‘ಇಂಡಿಯಾ’ ಮೈತ್ರಿಕೂಟದಡಿ ಸ್ಪರ್ಧಿಸುತ್ತೇವೆ. ಕೆಲವು ರಾಜ್ಯಗಳಲ್ಲಿ ಸೀಟು ಹಂಚಿಕೆಯಾಗಿದೆ’ ಎಂದು ಹೇಳಿದರು. ‘ತಮಿಳುನಾಡಿನಲ್ಲಿ ನಾವು 10 ಸೀಟು ಪಡೆದಿದ್ದೇವೆ. ದೆಹಲಿಯಲ್ಲಿ ಆಪ್ ಜೊತೆ ಒಪ್ಪಂದ ಆಗಿದೆ. ಉತ್ತರಪ್ರದೇಶದಲ್ಲೂ ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರದಲ್ಲಿ 19 ಸೀಟು ಗೆಲ್ಲುವ ವಿಶ್ವಾಸವಿದೆ. ಕೆಲವು ಕಡೆ ಸ್ವಲ್ಪ ಸಮಸ್ಯೆ ಇದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT