ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಸಚಿವರಾದ ಸತೀಶ, ಪರಮೇಶ್ವರ, ಮಹದೇವಪ್ಪ ರಹಸ್ಯ ಸಭೆ

Published 4 ಜನವರಿ 2024, 23:50 IST
Last Updated 4 ಜನವರಿ 2024, 23:50 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಗುರುವಾರ ರಾತ್ರಿ ಭೋಜನ ಸವಿಯುವ ನೆಪದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಸತೀಶ ಜಾರಕಿಹೊಳಿ ಮನೆಗೆ ಬಂದ ಪರಮೇಶ್ವರ ಮತ್ತು ಎಚ್‌.ಸಿ. ಮಹದೇವಪ್ಪ ಜೊತೆಯಾಗಿ ನಾಲ್ಕು ಗೋಡೆಗಳ ಮಧ್ಯೆ ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದರು ಎಂಬ ಮಾಹಿತಿ ಲಭ್ಯ ಆಗಿಲ್ಲ.

ಲೋಕಸಭೆ ಚುನಾವಣೆಗೆ ತಯಾರಿ ಕುರಿತಂತೆ ದೆಹಲಿಯಲ್ಲಿ ಪಕ್ಷದ ವರಿಷ್ಠರ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೆರಳಿರುವ ಬೆನ್ನಲ್ಲೆ, ಮೂವರು ದಲಿತ ಸಚಿವರು ಒಟ್ಟಾಗಿ ರಹಸ್ಯವಾಗಿ ವಿಚಾರ ವಿನಿಮಯ ನಡೆಸಿದ್ದಾರೆ.

ಬುಧವಾರ ರಾತ್ರಿ ದೆಹಲಿಗೆ ಹೊರಟಿದ್ದ ಸಿದ್ದರಾಮಯ್ಯ ಜೊತೆ ಸತೀಶ ಜಾರಕಿಹೊಳಿ ಕೂಡಾ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ತೆರಳಿದ್ದರು. ಬಳಿಕ ವಿಮಾನ ನಿಲ್ದಾಣದಿಂದ ಅವರು ವಾಪಸಾಗಿದ್ದರು. ಈ ಬಗ್ಗೆ ಸುದ್ದಿಗಾರರು ಕೇಳಿದಾಗ, ‘ಇಲಾಖೆಗೆ ಸಂಬಂಧಿಸಿದ್ದು ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಬೇಕಿತ್ತು. ಹೀಗಾಗಿ ಅವರ ಜೊತೆ ವಿಮಾನ ನಿಲ್ದಾಣದವರೆಗೆ ಹೋಗಿದ್ದೆ’ ಎಂದಿದ್ದಾರೆ. 

ಲೋಕಸಭೆ ಚುನಾವಣೆಗೂ ಮೊದಲು ಮೂರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಸಿಸಬೇಕೆಂಬ ಅಭಿಪ್ರಾಯವನ್ನು ಈಗಾಗಲೇ ಈ ಮೂವರೂ ವ್ಯಕ್ತಪಡಿಸಿದ್ದಾರೆ. ಲಿಂಗಾಯತ, ದಲಿತ ಮತ್ತು ಪರಿಶಿಷ್ಟ ಪಂಗಡಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಬೇಡಿಕೆಯಿದೆ. ಈ ವಿಚಾರದ ಬಗ್ಗೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ಕುರಿತಂತೆ ಈ ಮೂವರು ನಾಯಕರು ಚರ್ಚಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೆಲ‌ವು ದಿನಗಳ ಹಿಂದೆ ಪರಮೇಶ್ವರ ನಿವಾಸದಲ್ಲಿಯೂ ಈ ಮೂವರು ಊಟಕ್ಕೆ ಸೇರಿ ರಹಸ್ಯ ಸಭೆ ನಡೆಸಿದ್ದರು. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಜೊತೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT