ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಆನುವಂಶಿಕ ಪ್ರಯೋಗಾಲಯ ಸ್ಥಾಪನೆಗೆ ಒತ್ತಾಯ

Published 6 ಮಾರ್ಚ್ 2024, 15:36 IST
Last Updated 6 ಮಾರ್ಚ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು:ಮಾನವ– ವನ್ಯಜೀವಿ ಸಂಘರ್ಷದ ಹಿನ್ನೆಲೆಯಲ್ಲಿ ಮನುಷ್ಯರನ್ನು ಕೊಲ್ಲುವ ಪ್ರಾಣಿಗಳನ್ನು ನಿಖರವಾಗಿ ಪತ್ತೆ ಮಾಡಿ, ಅವುಗಳನ್ನು ಹಿಡಿಯುವ ಉದ್ದೇಶಕ್ಕಾಗಿ ಆನುವಂಶಿಕ ಪ್ರಯೋಗಾಲಯವೊಂದನ್ನು ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಅವರು ಅರಣ್ಯ ಸಚಿವ ಈಶ್ವರ್‌ ಖಂಡ್ರೆಯವರಿಗೆ ಪತ್ರ ಬರೆದಿದ್ದಾರೆ.

ಸಾಕಷ್ಟು ಬಾರಿ ತಪ್ಪು ತಿಳಿವಳಿಕೆಯಿಂದ ಬೇರೆ ಪ್ರಾಣಿಗಳನ್ನು ಹಿಡಿಯುವ ಅಥವಾ ಕೊಲ್ಲುವ ಸಾಧ್ಯತೆಗಳಿರುತ್ತವೆ. ಆನುವಂಶಿಕ ಪ್ರಯೋಗಾಲಯದಿಂದ ದಾಳಿ ಮಾಡಿದ ಪ್ರಾಣಿಯನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯವಿದೆ. ಕ್ಯಾಮೆರಾ ಟ್ರ್ಯಾಪ್‌ ಚಿತ್ರಗಳೊಂದಿಗೆ ಪ್ರಾಣಿಗಳ ಕೂದಲು, ಎಂಜಲು, ಹಿಕ್ಕೆಯನ್ನು ಸಂಗ್ರಹಿಸಿ, ಸಾವಿಗೆ ಅಥವಾ ಗಾಯಪಡಿಸಿದ ಪ್ರಾಣಿಯನ್ನು ನಿಖರವಾಗಿ ಪತ್ತೆ ಮಾಡಬಹುದು ಎಂದು ಹೇಳಿದ್ದಾರೆ.

ಈಗ ಸಂಗ್ರಹಿಸುತ್ತಿರುವ ಆನುವಂಶಿಕ ಮಾದರಿಗಳನ್ನು (ಸ್ಯಾಂಪಲ್‌) ಡೆಹರಾಡೂನ್ ಅಥವಾ ಹೈದರಾಬಾದಿನಲ್ಲಿರುವ ಪ್ರಯೋಗಾಲಯಗಳಿಗೆ ಕಳಿಸಲಾಗುತ್ತಿದೆ. ಅಲ್ಲಿಂದ ಮಾದರಿಗಳ ಫಲಿತಾಂಶ ಬರಲು ಹಲವು ವಾರಗಳೇ ಬೇಕಾಗುತ್ತವೆ. ಅಷ್ಟರಲ್ಲಿ ಸಂಘರ್ಷ ಹೆಚ್ಚಾಗಿರುತ್ತದೆ ಅಥವಾ ಪ್ರಾಣಿಯನ್ನು ಆಗಲೇ ಹಿಡಿಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಹುಲಿ, ಚಿರತೆಯಂತಹ ದೊಡ್ಡ ಮಾಂಸಾಹಾರಿ ಪ್ರಾಣಿಗಳಿಂದ ಇತ್ತೀಚೆಗೆ ಸಾವಿಗೀಡಾಗುತ್ತಿರುವವರು ಮತ್ತು ಗಾಯಗೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಸಂದರ್ಭಗಳಲ್ಲಿ ಸಾವಿಗೆ ಅಥವಾ ಗಾಯಕ್ಕೆ ಕಾರಣವಾದ ಪ್ರಾಣಿಯನ್ನು ಹಿಡಿದು ಪುನರ್‌ವಸತಿ ಕೇಂದ್ರಗಳಿಗೆ ಕೊಂಡೊಯ್ಯಲಾಗುತ್ತಿದೆ. ಕೆಲವೊಮ್ಮೆ ಪ್ರಾಣಿಗಳನ್ನು ಸೆರೆ ಹಿಡಿದರೂ ಮಾನವ ಸಾವು ಕಡಿಮೆ ಆಗುವುದಿಲ್ಲ. ಹೀಗಾಗಿ ಯಾವ ಪ್ರಾಣಿ ದಾಳಿ ನಡೆಸುತ್ತಿದೆ ಎಂಬುದನ್ನು ನಿಖರವಾಗಿ ಕಂಡುಕೊಳ್ಳುವುದು ಅಗತ್ಯ ಎಂದು ವಿವರಿಸಿದ್ದಾರೆ.

ಆನುವಂಶಿಕ ಪ್ರಯೋಗಾಲಯವನ್ನು ಅರಣ್ಯ ಇಲಾಖೆ ಅಡಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಸ್ಥಾಪಿಸಬೇಕು. ಕರ್ನಾಟಕದಲ್ಲಿರುವ ವನ್ಯಜೀವಿಗಳ ಆನುವಂಶಿಕ ಪರೀಕ್ಷೆ ಮಾಡುವ ವೈಜ್ಞಾನಿಕ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ತ್ವರಿತವಾಗಿ ಪರೀಕ್ಷೆಗಳ ಫಲಿತಾಂಶ ಪಡೆದು ವನ್ಯಜೀವಿಗಳಿಗೆ ಹೋಲಿಸಿ ವೈಜ್ಞಾನಿಕ ಉತ್ತರ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT