ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದಾರಿ ಗಣಿ ಯೋಜನೆ; ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವರ ಬೇಸರ

Published 27 ಜೂನ್ 2024, 20:18 IST
Last Updated 27 ಜೂನ್ 2024, 20:18 IST
ಅಕ್ಷರ ಗಾತ್ರ

ನವದೆಹಲಿ: ‘ಕೇಂದ್ರ ಸಚಿವರು, ಸಂಸದರು ಕೆಲಸ ಮಾಡಲ್ಲ ಅಂತೀರಿ. ಕೆಲಸ ಮಾಡಲು ಹೋದರೆ ಅಡ್ಡಿ ಮಾಡುತ್ತೀರಿ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ದೇವದಾರಿ ಗಣಿ ಯೋಜನೆಗೆ ಸಹಿ ಹಾಕಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯಲ್ಲಿ ಗುರುವಾರ ನಡೆದ ರಾಜ್ಯದ ಸಂಸದರ ಜತೆಗಿನ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರಕ್ಕೆ ₹2,500 ಕೋಟಿ ಆದಾಯ ಬರುತ್ತದೆ. ಆದರೆ, ಇದಕ್ಕೆ ಬೇರೆ ಅರ್ಥ ಕಲ್ಪಿಸಿ, ಅರಣ್ಯ ನಾಶವಾಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ’ ಎಂದರು.

’ಕುದುರೆಮುಖ ಕಂಪನಿಗೆ ಅರಣ್ಯ ತೀರುವಳಿ ಪತ್ರ ಕೊಡಲು ರಾಜ್ಯ ಸರ್ಕಾರ ನಿರಾಕರಿಸಿದೆ. ಈ ಬಗ್ಗೆ ಮಾಹಿತಿ ಪಡೆಯಲು ಅರಣ್ಯ ಸಚಿವರಿಗೆ ದೂರವಾಣಿ ಕರೆ ಮಾಡಿದೆ. ಅರಣ್ಯ ಸಚಿವರು ಕರೆ ಸ್ವೀಕರಿಸಲಿಲ್ಲ. ನಂತರ, ಪಿಸಿಸಿಎಫ್ ಅವರಿಗೆ ಕರೆ ಮಾಡಿ ಮಾಹಿತಿ ತೆಗೆದುಕೊಂಡೆ. ಈ ಯೋಜನೆಗೆ ನಿಮ್ಮ ಪಕ್ಷದ ಸರ್ಕಾರವೇ ಅನುಮತಿ ನೀಡಿದೆ. ಆದರೆ, ಈಗ ಅರಣ್ಯ ನಾಶ ಆಗುತ್ತದೆ ಎಂದು ನೆಪ ಹೇಳುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಐಒಸಿಎಲ್ ₹390 ಕೋಟಿ ಕಟ್ಟಿದೆ. ಮರು ಅರಣ್ಯೀಕರಣ ಮಾಡುವುದಕ್ಕೆ ₹194 ಕೋಟಿ ಪಾವತಿಸಿದೆ. 400 ಎಕರೆ ಪ್ರದೇಶಕ್ಕೆ ಗಣಿಗಾರಿಕೆಗೆ ಅನುಮತಿ ಕೊಡಲಾಗಿದೆ. 800 ಏಕರೆಗೂ ಹೆಚ್ಚು ಜಾಗದಲ್ಲಿ ಕಾಡು ಬೆಳೆಸಲು ಹಣ ಪಾವತಿಸಿದೆ. ಆದರೆ, ಕುದುರೆಮುಖ ಸಂಸ್ಥೆ ಲಕ್ಯಾ ಅಣೆಕಟ್ಟೆಯನ್ನು ಒಂದು ಅಡಿ ಎತ್ತರಿಸಿದೆ ಎನ್ನುವ ಕಾರಣಕ್ಕೆ, ಕೆಲ ಭಾಗದಷ್ಟು ಭೂಮಿಯನ್ನು ಅರಣ್ಯ ಇಲಾಖೆಗೆ ವಾಪಸ್ ಹಸ್ತಾಂತರ ಮಾಡಿಲ್ಲ ಎಂದು ಕೊಕ್ಕೆ ಹಾಕಿದ್ದೀರಿ. ಕೆಲಸ ನಿಲ್ಲಿಸಿ ₹137 ಕೋಟಿ ನಷ್ಟದಲ್ಲಿ ಇದೆ ಆ ಕಂಪನಿ. ಸರ್ಕಾರಿ ಸಂಸ್ಥೆ ನಷ್ಟದಲ್ಲಿದೆ. ಇದು ಒಳ್ಳೆಯದಲ್ಲ. ಇದೇ ಮಾನದಂಡ ಅನ್ವಯ ಮಾಡುವುದಾದರೆ ಮೇಕೆದಾಟು ಯೋಜನೆಗೆ ಹೇಗೆ ಅನುಮತಿ ಸಿಗುತ್ತದೆ? ಆಲೋಚನೆ ಮಾಡಿ. ಅಲ್ಲಿ ಕಾಡು ನಾಶ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ದಯಮಾಡಿ ಈ ಬಗ್ಗೆ ಒಂದು ಪ್ರತ್ಯೇಕ ಸಭೆ ಕರೆಯಿರಿ. ನಾನು ನಿಮ್ಮ ಅನುಮಾನಗಳನ್ನು ನಿವಾರಣೆ ಮಾಡುತ್ತೇನೆ. ರಾಜ್ಯಕ್ಕೆ ಲಾಭವಾಗುವ ಯೋಜನೆ ನೆನೆಗುದಿಗೆ ಬೀಳುವುದು ಬೇಡ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT