ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೋತ್ತರ ಸಮೀಕ್ಷೆ ಸುಳ್ಳಾಗಲಿದೆ: ಡಿಕೆಶಿ

Published 2 ಜೂನ್ 2024, 16:46 IST
Last Updated 2 ಜೂನ್ 2024, 16:46 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಮತಗಟ್ಟೆ ಸಮೀಕ್ಷೆಗಳು ಸುಳ್ಳಾದಂತೆ, ಲೋಕಸಭೆ ಚುನಾವಣೆಯ ಸಮೀಕ್ಷೆಗಳೂ ಸುಳ್ಳಾಗಲಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದರು.

ಎಐಸಿಸಿ ನಾಯಕರ ಜತೆ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆಗಳು ಸುಳ್ಳಾಯಿತು. ನನ್ನ ಭವಿಷ್ಯವೇ ನಿಜವಾಗಿತ್ತು’ ಎಂದರು.

‘ವಿಧಾನಸಭೆ ಚುನಾವಣೆಯಲ್ಲಿ ಸಮೀಕ್ಷೆಗಳು ಕಾಂಗ್ರೆಸ್‌ಗೆ 80ರಿಂದ 85 ಸ್ಥಾನ ಕೊಟ್ಟಿದ್ದವು. 136 ಸ್ಥಾನ ಗೆಲ್ಲುತ್ತೇವೆ ಎಂದು ನನ್ನ ರಾಜಕೀಯ ಅನುಭವದ ಮೇಲೆ ಹೇಳಿದ್ದೆ’ ಎಂದರು.

‘ಸಮೀಕ್ಷೆಗೆ ಸಂಸ್ಥೆಗಳು ಐದು ಸಾವಿರದಷ್ಟು ಜನರ ಅಭಿಪ್ರಾಯವನ್ನಷ್ಟೇ ಸಂಗ್ರಹಿಸುತ್ತವೆ. ಹೀಗಾಗಿ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ದಾಟಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ನಂಬಿಕೆ ಬಂದಿದೆ. ಇವು ನಮ್ಮ ಕೈ ಹಿಡಿಯಲಿವೆ. ಮೊದಲ ಹಂತದ ಚುನಾವಣೆಗಿಂತ ಎರಡನೇ ಹಂತದ ಚುನಾವಣೆಯಲ್ಲಿ ಎಐಸಿಸಿ ನೀಡಿದ ಗ್ಯಾರಂಟಿಗಳ ಜನರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿವೆ. ಗ್ಯಾರಂಟಿಗಳು ದೇಶದ ಜನರ ಮನಸ್ಸು ಗೆದ್ದಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT