ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ದಿನಾಂಕ ಪ್ರಕಟಣೆ ಇಂದು

Published 16 ಮಾರ್ಚ್ 2024, 0:12 IST
Last Updated 16 ಮಾರ್ಚ್ 2024, 0:12 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಲಿದೆ. ‘ಹ್ಯಾಟ್ರಿಕ್‌’ ಜಯದ ಅಮಿತ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ‘ಮಿಷನ್‌ 400’ರ ಕನವರಿಕೆಯಲ್ಲಿದ್ದರೆ, ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಕಮಲ ಪಾಳಯವನ್ನು ಅಧಿಕಾರದಿಂದ ಇಳಿಸಬಹುದು ಎಂಬ ನಂಬಿಕೆಯಲ್ಲಿ ಕಣಕ್ಕೆ ಇಳಿಯಲು ಮುಂದಾಗಿದೆ. 

ಚುನಾವಣಾ ಆಯೋಗದ ನೂತನ ಸದಸ್ಯರಾದ ಜ್ಞಾನೇಶ್‌ ಕುಮಾರ್ ಹಾಗೂ ಸುಖಬೀರ್ ಸಿಂಗ್ ಸಂಧು ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. ಅದರ ಬೆನ್ನಲ್ಲೇ, ಲೋಕಸಭೆ ಹಾಗೂ ಕೆಲವು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಮಧ್ಯಾಹ್ನ 3 ಗಂಟೆಗೆ ಮಾಧ್ಯಮಗೋಷ್ಠಿ ನಡೆಯಲಿದೆ ಎಂದು ಆಯೋಗದ ವಕ್ತಾರರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದರು. 

ಲೋಕಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತ ಹೊಂದುವುದು ಬಿಜೆಪಿಯ ಮಹದಾಸೆ. ಅದಕ್ಕಾಗಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಕಾಮಗಾರಿಗಳ ಚಾಲನೆಯ ಹೆಸರಿನಲ್ಲಿ ನಾಲ್ಕು ದಿಕ್ಕುಗಳ ರಾಜ್ಯಗಳಿಗೆ ಪ್ರವಾಸ ಮಾಡಿ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿ ಬಿಟ್ಟಿದ್ದಾರೆ. ಅವರು ಕಳೆದೊಂದು ತಿಂಗಳಲ್ಲಿ ಉತ್ತರ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಚಾಲನೆ ಕೊಟ್ಟಿರುವ ಹಾಗೂ ಉದ್ಘಾಟಿಸಿರುವ ಕಾಮಗಾರಿಗಳ ಗಾತ್ರ ಸರಿಸುಮಾರು ಕೇಂದ್ರದ ಬಜೆಟ್‌ನಷ್ಟು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಕ್ರಮಣಕಾರಿ ನಾಯಕತ್ವ ಪ್ರದರ್ಶಿಸಿದ್ದ ಮೋದಿ ತಮ್ಮ ಜನಪ್ರಿಯತೆಯ ಅಲೆಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ಯಶಸ್ಸು ಕಂಡಿದ್ದರು. ಈ ಸಲವೂ ಅದೇ ಅಲೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ‘ಚುನಾವಣಾ ಚಾಣಕ್ಯ’ ಎಂಬ ಬಿರುದನ್ನು ಬೆನ್ನಿಗಂಟಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆ ನೆಲವನ್ನು ಹದಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ‘ಭಾರತ ಜೋಡೊ ನ್ಯಾಯ ಯಾತ್ರೆ’ ಮೂಲಕ ಹಿಂದಿ ಸೀಮೆಯ ರಾಜ್ಯಗಳಲ್ಲಿ ಪಕ್ಷದ ಮತ ಪ್ರಮಾಣ ಹೆಚ್ಚಿಸುವ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದೊಂದು ತಿಂಗಳಲ್ಲಿ ವಿವಿಧ ರ‍್ಯಾಲಿಗಳಲ್ಲಿ ಭಾಗಿಯಾಗಿ ಪ್ರಚಾರ ನಡೆಸಿದ್ದಾರೆ. ಸತತ ಸೋಲು ಹಾಗೂ ‘ಆಪರೇಷನ್ ಕಮಲ’ದಿಂದ ಸೋತು ಕಂಗಾಲಾಗಿರುವ ಗತಕಾಲದ ಬೃಹತ್‌ ಪಕ್ಷ ಕಾಂಗ್ರೆಸ್‌ಗೆ ಈ ಚುನಾವಣೆಯು ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ಚುನಾವಣೆಯಲ್ಲಿ ಸ್ಥಾನ ಗಳಿಕೆಯಲ್ಲಿ ಗಣನೀಯ ಸುಧಾರಣೆ ಕಾಣದಿದ್ದರೆ ಭವಿಷ್ಯದಲ್ಲಿ ಮತ್ತೆ ತಲೆಯೆತ್ತುವುದು ಕಷ್ಟ ಎಂಬ ಅರಿವು ಹಾಗೂ ಕಳವಳದಿಂದ ‘ಕೈ’ ದಂಡ ನಾಯಕರು ಜಾಗರೂಕತೆಯ ನಡೆ ಇಟ್ಟಿದ್ದಾರೆ. ಈ ಚುನಾವಣೆಯು ಕಾಂಗ್ರೆಸ್ ಪಕ್ಷದ ನಾಯಕತ್ವ, ಸಂಘಟನಾ ಸಾಮರ್ಥ್ಯವನ್ನು ಅಗ್ನಿಪರೀಕ್ಷೆಗೆ ಒಡ್ಡಲಿದೆ.

ಎನ್‌ಡಿಎ ಮೈತ್ರಿಕೂಟಕ್ಕೆ 400ರ ಗಡಿ ದಾಟುವ ಗುರಿಯನ್ನು ಪ್ರಧಾನಿ ಮೋದಿ ನಿಗದಿಪಡಿಸಿದ್ದಾರೆ. ಇದಕ್ಕಾಗಿ ಆಡಳಿತಾರೂಢ ಬಿಜೆಪಿಯು ಹೊಸ ಹಾಗೂ ಹಳೆಯ ಮಿತ್ರರನ್ನು ತನ್ನ ತೆಕ್ಕೆಯೊಳಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಕಮಲ ಪಾಳಯವು ಟಿಡಿಪಿ, ಜನಸೇನಾ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿಯನ್ನು ಮಿತ್ರಕೂಟಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಡಿ ಹಾಗೂ ಅಕಾಲಿದಳವನ್ನೂ ಎನ್‌ಡಿಎಗೆ ಕರೆತಂದು ಮತ ಹಾಗೂ ನೆಲೆ ವಿಸ್ತರಿಸಲು ಬಿರುಸಿನ ಪ್ರಯತ್ನ ನಡೆಸಿದೆ.

ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ಗುಜರಾತ್‌, ರಾಜಸ್ಥಾನ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಕಳೆದ ಚುನಾವಣೆಯಲ್ಲೇ ಉತ್ತುಂಗಕ್ಕೆ ಏರಿರುವ ಬಿಜೆಪಿ ಹಾಗೂ ಮಿತ್ರರು ಈ ಸಲ ದಕ್ಷಿಣದಲ್ಲಿ ‘ಮ್ಯಾಜಿಕ್‌’ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಶ್ರೀರಾಮ ಮಂದಿರದ ಕನಸನ್ನು ಸಾಕಾರಗೊಳಿಸಿರುವುದರಿಂದ ಮತ ಗಳಿಕೆಯಲ್ಲಿ ಏರುಗತಿ ಕಂಡು ಅಧಿಕಾರದ ಗದ್ದುಗೆಯನ್ನು ಸುಲಲಿತವಾಗಿ ಏರಬಹುದು ಎಂಬ ಅಂದಾಜಿನಲ್ಲಿ ಕಮಲ ಪಾಳಯದ ಉನ್ನತ ನಾಯಕರಿದ್ದಾರೆ. 

‘ಇಂಡಿಯಾ’ ಮೈತ್ರಿಕೂಟವನ್ನು ನಡು ದಾರಿಯಲ್ಲಿ ಕೈ ಬಿಟ್ಟ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಎನ್‌ಡಿಎ ಕೂಟಕ್ಕೆ ಸೇರಿಕೊಂಡಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ‘ಇಂಡಿಯಾ’ದಿಂದ ಅಂತರ ಕಾಯ್ದುಕೊಂಡು ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಮುಂದಡಿ ಇಟ್ಟಿದ್ದಾರೆ. ಅದರ ನಡುವೆಯೂ, ಮೈತ್ರಿಕೂಟದಲ್ಲಿ ಉಳಿದಿರುವ ಮಿತ್ರರೊಂದಿಗೆ ಸೀಟು ಹಂಚಿಕೆ ಪೂರ್ಣಗೊಳಿಸಲು ಕಾಂಗ್ರೆಸ್‌ ಸಕಲ ಪ್ರಯತ್ನ ನಡೆಸಿದೆ. ಉತ್ತರ ಪ್ರದೇಶ, ತಮಿಳುನಾಡು, ದೆಹಲಿಯಂತಹ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದ್ದರೆ, ಬಿಹಾರ, ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಕೊಡು–ಕೊಳ್ಳುವಿಕೆಯಲ್ಲಿ ಇನ್ನೂ ಸಹಮತಕ್ಕೆ ಬಂದಿಲ್ಲ. 

ನಾಲ್ಕು ರಾಜ್ಯಗಳ ವಿಧಾನಸಭೆಗೂ ಚುನಾವಣೆ

ಲೋಕಸಭೆಯ ಜತೆಗೆ ಒಡಿಶಾ, ಸಿಕ್ಕಿಂ, ಆಂಧ್ರ ಪ್ರದೇಶ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2018ರ ನವೆಂಬರ್‌ನಿಂದ ವಿಧಾನಸಭೆ ಅಸ್ತಿತ್ವದಲ್ಲಿಲ್ಲ. ಆಯೋಗವು ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುತ್ತದೆಯೇ ಇಲ್ಲವೇ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆಯ ಸಿದ್ಧತೆಗಳನ್ನು ಆಯೋಗ ಪರಿಶೀಲಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯಬೇಕಿದೆ. ಜನಾಂಗೀಯ ಹಿಂಸಾಚಾರದಲ್ಲಿ ನಲುಗಿದ ಮಣಿಪುರದಲ್ಲಿ ಆಯೋಗವು ಚುನಾವಣಾ ಪ್ರಕ್ರಿಯೆಯನ್ನು ಹೇಗೆ ನಡೆಸುತ್ತದೆ ಎಂಬುದರ ಬಗ್ಗೆಯೂ ಜನರ ದೃಷ್ಟಿ ನೆಟ್ಟಿದೆ.  

2019ರ ಲೋಕಸಭೆ ಚುನಾವಣೆಗೆ ಆಯೋಗವು ಮಾರ್ಚ್‌ 10ರಂದು ವೇಳಾಪಟ್ಟಿ ಪ್ರಕಟಿಸಿತ್ತು. ಏಪ್ರಿಲ್‌ 11 ಹಾಗೂ ಮೇ 19ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 23ರಂದು ಮತ ಎಣಿಕೆ ನಡೆಸಲಾಗಿತ್ತು. ಬಿಜೆಪಿ 303 ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಕಾಂಗ್ರೆಸ್‌ 52 ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು.

  • ಪ್ರಸ್ತುತ ಲೋಕಸಭೆಯ ಅವಧಿ ಜೂನ್‌ 16ಕ್ಕೆ ಕೊನೆ

  • ಅದಕ್ಕೆ ಮುನ್ನ ಹೊಸ ಸರ್ಕಾರ ರಚನೆಯಾಗಬೇಕಿದೆ

  • 12 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳು ಇರಲಿವೆ

  • ಸುಮಾರು 97 ಕೋಟಿ ಜನರು ಮತ ಚಲಾಯಿಸಲು ಅರ್ಹರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT