ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವನದ ದಿಕ್ಕು ಬದಲಿಸಿದ ತುರ್ತು ಪರಿಸ್ಥಿತಿ: ಎಸ್‌.ಆರ್‌. ಹಿರೇಮಠ

‘ಪರೋಕ್ಷ ಬೆದರಿಕೆ, ಆಮಿಷ ಒಡ್ಡಿದ್ದ ಬಿಎಸ್‌ವೈ, ಜನಾರ್ದನ ರೆಡ್ಡಿ’
Last Updated 10 ಜುಲೈ 2021, 16:52 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಅಮೆರಿಕದ ಶಿಕಾಗೋದಲ್ಲಿದ್ದ ವೇಳೆಯಲ್ಲೇ ಆಗಿನ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಸರ್ವಾಧಿಕಾರದ ವಿರುದ್ಧ ಆಗ ಸಂಘಟಿಸಿದ್ದ ಹೋರಾಟ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. . .

ಹೀಗೆ ತಮ್ಮ ಹೋರಾಟದ ಹಾದಿಯನ್ನು ನೆನಪಿಸಿಕೊಂಡರು ರಾಜ್ಯದಲ್ಲಿ ಜನಪರ ಹೋರಾಟಗಳ ಹಿರಿಯಜ್ಜನಂತೆ ಇರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ.

‘ಪ್ರಜಾವಾಣಿ ಸೆಲೆಬ್ರಿಟಿ ಲೈವ್‌’ ಸಂವಾದದಲ್ಲಿ ಶನಿವಾರ ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಬಾಲ್ಯ, ಯೌವನ, ಅಮೆರಿಕದಲ್ಲಿದ್ದ ದಿನಗಳು, ಕುಟುಂಬ, ಹೋರಾಟದ ಕುರಿತು ಅವರು ಮಾತನಾಡಿದರು. ಹೋರಾಟದ ಗಟ್ಟಿ ಧ್ವನಿಯಾಗಿ ರೂಪುಗೊಳ್ಳಲು ಹೇಗೆ ಸಾಧ್ಯವಾಯಿತು ಎಂದು ವಿವರಿಸುತ್ತಲೇ, ಯುವಜನರು ದೇಶದ ಒಳಿತಿಗಾಗಿ ಈ ಹಾದಿಯಲ್ಲಿ ಕ್ರಮಿಸಲು ಹೇಗೆ ಸಿದ್ಧರಾಗಬೇಕು ಎಂಬುದರ ಕುರಿತು ಅನೇಕ ಸಲಹೆಗಳನ್ನು ನೀಡಿದರು.

‘ಅವಿಭಜಿತ ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಬೆಳವಣಿಕೆಯಲ್ಲಿ ನಾನು ಹುಟ್ಟಿದ್ದು. ಐದು ವರ್ಷದವನಿರುವಾಗಲೇ ತಂದೆ ತೀರಿಕೊಂಡರು. ನಂತರ ತಾಯಿಯೊಂದಿಗೆ ವಿಜಯಪುರಕ್ಕೆ ವಲಸೆ. ಅಲ್ಲಿ ದುಡಿಯುತ್ತಲೇ ಪಿಯುಸಿ ಪೂರೈಸಿದೆ. ಬಳಿಕ ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದೆ. ನಂತರ ವಿದ್ಯಾರ್ಥಿ ವೇತನ ಪಡೆದು ಅಮೆರಿಕಕ್ಕೆ ತೆರಳಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್‌. ಪೂರೈಸಿದೆ’ ಎಂದು ವಿವರಿಸಿದರು.

ತಂದೆ ಸಹಕಾರ ಚಳವಳಿಯಲ್ಲಿ ಸಕ್ರಿಯರಾಗಿದ್ದವರು. ತಾಯಿ ಬಸವಣ್ಣನ ಅನುಯಾಯಿ. ಇಬ್ಬರ ಮಾರ್ಗದರ್ಶನವೇ ಹೋರಾಟದ ಹಾದಿಯಲ್ಲಿ ಸಾಗಲು ಕಾರಣವಾಯಿತು. ಹೋರಾಟದ ಗುಣ ತಂದೆಯಿಂದ ಬಂದರೆ, ‘ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು’ ಎಂಬುದು ತಾಯಿಯ ಬಳುವಳಿ. ಅದೇ ತಮಗೆ ಇಂಡಿಯಾದ ತುರ್ತು ಪರಿಸ್ಥಿತಿ ವಿರುದ್ಧ ಅಮೆರಿಕದಲ್ಲಿ ಹೋರಾಟ ಆರಂಭಿಸಲು ಪ್ರೇರಣೆಯಾಯಿತು. ಆ ಹೋರಾಟ ವಿಶ್ವಸಂಸ್ಥೆಯ ಗಮನವನ್ನೂ ಸೆಳೆಯಿತು ಎಂದರು.

‘ಶಿಕಾಗೊದಲ್ಲಿ ಅತ್ಯುನ್ನತ ಹುದ್ದೆಗಳು ದೊರೆತವು. ಆಗಲೇ ಮೇವಿಸ್ಸಾ ಅವರ ಪರಿಚಯವಾಯಿತು. ನಂತರ ಇಬ್ಬರೂ ಪ್ರೀತಿಸಿದೆವು. ತಾಯಿಯ ಒಪ್ಪಿಗೆ ಪಡೆದು ಮದುವೆ ಆದೆ. ನನ್ನ ತಾಯಿಯ ಆಸೆಯಂತೆ ಮೇವಿಸ್ಸಾ ಅವರು ಶ್ಯಾಮಲಾ ಹಿರೇಮಠ ಆದರು. ಬಸವಣ್ಣನ ಅನುಯಾಯಿ ಆದರು. 1979ರಲ್ಲಿ ಶಿಕಾಗೋದಿಂದ ಮರಳಿ ರಾಣೆಬೆನ್ನೂರಿನ ಮೆಡ್ಲೇರಿಯಲ್ಲಿಯಲ್ಲಿ 13 ವರ್ಷ ಇದ್ದೆವು. ಆಗ ಹಳ್ಳಿಯ ಜನರ ಜತೆಗಿದ್ದು ಕೆಲಸ ಮಾಡುವುದಕ್ಕೆ ಪ್ರೇರಣೆ ಬಂದಿದ್ದೇ ಶ್ಯಾಮಲಾ ಅವರಿಂದ’ ಎಂದು ಪತ್ನಿಯ ಜತೆಗಿನ ಒಡನಾಟ ಹಂಚಿಕೊಂಡರು.

ಹರಿಹರ ಪಾಲಿಫೈಬರ್ಸ್‌ನಿಂದ ಆಗುತ್ತಿದ್ದ ತುಂಗಭದ್ರಾ ನದಿಯ ಮಾಲಿನ್ಯದ ವಿರುದ್ಧದ ಹೋರಾಟ, ಛತ್ತೀಸಘಡದ ಬಸ್ತರ್‌ ಜಿಲ್ಲೆಯಲ್ಲಿ ನಡೆಯುತ್ತಿದ್ದ ಆದಿವಾಸಿಗಳ ಮೇಲಿನ ದೌರ್ಜನ್ಯ ಮತ್ತು ಅರಣ್ಯ ನಾಶದ ವಿರುದ್ಧದ ಹೋರಾಟ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟ, ಸರ್ಕಾರಿ ಜಮೀನು ಕಬಳಿಕೆ ವಿರುದ್ಧದ ಹೋರಾಟದ ಹಾದಿಯಲ್ಲಿ ಎದುರಾದ ಸಂಕಷ್ಟ, ಸವಾಲು, ದೊರೆತ ಯಶಸ್ಸಿನ ಕಥನಗಳನ್ನು ಎಳೆ ಎಳೆಯಾಗಿ ವಿವರಿಸಿದರು‌.

‘ದಶಕದ ಹಿಂದೆ ಹೋರಾಟದ ಹಾದಿಯಲ್ಲಿ ಆಗ ಮುಖ್ಯಮಂತ್ರಿ ಯಡಿಯೂರಪ್ಪ, ಅಂದಿನ ಸಚಿವ ಜಿ. ಜನಾರ್ದನ ರೆಡ್ಡಿ ಸೇರಿದಂತೆ ಹಲವರಿಂದ ಪರೋಕ್ಷವಾಗಿ ಬೆದರಿಕೆ, ಆಮಿಷಗಳು ಬಂದವು. ಆದರೆ, ಯಾವತ್ತೂ ನೇರವಾಗಿ ಬೆದರಿಕೆ ಬಂದಿಲ್ಲ. ಸರಳ ಜೀವನ ಶೈಲಿ ನನ್ನದು. ನಮ್ಮ ಕಾರ್ಯಶೈಲಿಯೂ ಅದೇ. ಹೋರಾಟದ ಆರಂಭದ ದಿನಗಳಲ್ಲಿ ಶಾಲೆ, ದೇವಸ್ಥಾನಗಳಲ್ಲಿ ಮಲಗುತ್ತಿದ್ದೆವು. ದೇಣಿಗೆಗಳನ್ನು ದುರ್ಬಳಕೆ ಮಾಡಿ ಗೊತ್ತಿಲ್ಲ. ಹಲವು ತನಿಖೆ ನಡೆದರೂ ನಮ್ಮ ಗೌರವಕ್ಕೆ ಚ್ಯುತಿ ಬಂದಿಲ್ಲ. ಹೊಗಳಿಕೆ, ತೆಗಳಿಕೆಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಆದರೆ, ನಾವು ಯಾವತ್ತೂ ಯಾರ ಎದುರೂ ತಲೆ ತಗ್ಗಿಸಿ ನಿಲ್ಲುವಂತೆ ಆಗಬಾರದು. ನಮ್ಮ ಎದುರಿಗೆ ಇರುವವರೂ ತಲೆ ತಗ್ಗಿಸಿಬಿಡಬೇಕು ಎಂದೂ ಬಯಸಬಾರದು ಎಂಬ ನನ್ನ ತಾಯಿಯ ಮಾತು ಸದಾಕಾಲವೂ ನನಗೆ ಆದರ್ಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT