ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ಮೊದಲ ದಿನ ಸುಸೂತ್ರ

Published 18 ಏಪ್ರಿಲ್ 2024, 15:59 IST
Last Updated 18 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಗುರುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸುಸೂತ್ರವಾಗಿ ನೆರವೇರಿತು. 

ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲಿನ ನಡುವೆ ರಾಜ್ಯದ 737 ಕೇಂದ್ರಗಳಲ್ಲಿ ಬೆಳಿಗ್ಗೆ ಜೀವಶಾಸ್ತ್ರ, ಮಧ್ಯಾಹ್ನದ ನಂತರ ಗಣಿತ ಪತ್ರಿಕೆಗಳ ಪರೀಕ್ಷೆಗಳು ನಡೆದವು. ಹೆಸರು ನೋಂದಾಯಿಸಿಕೊಂಡಿದ್ದ 3.49 ಲಕ್ಷ ಅಭ್ಯರ್ಥಿಗಳಲ್ಲಿ ಶೇ 80ರಷ್ಟು ಹಾಜರಾಗಿದ್ದರು. 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಮಲ್ಲೇಶ್ವರ‌ದ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ವೀಕ್ಷಿಸಿದರು. ಕುಡಿಯುವ ನೀರು ಸೇರಿದಂತೆ ವಿದ್ಯಾರ್ಥಿಗಳಿಗೆ ಒದಗಿಸಿದ್ದ ಮೂಲಸೌಲಭ್ಯಗಳ ಮಾಹಿತಿ ಪಡೆದುಕೊಂಡರು.

20ರಂದು ಕನ್ನಡ ಪರೀಕ್ಷೆ:

ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಇದೇ 20ರಂದು ಬೆಳಿಗ್ಗೆ 11.30ರಿಂದ 12.30ರವರೆಗೆ ಕನ್ನಡ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 1,545 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ.

ಪಠ್ಯದ ಹೊರಗಿನ ಪ್ರಶ್ನೆ: ಆಕ್ಷೇಪಣೆಗೆ ನಾಳೆ ವ್ಯವಸ್ಥೆ ಜೀವವಿಜ್ಞಾನ ಮತ್ತು ಗಣಿತ ಪ್ರಶ್ನೆಪತ್ರಿಕೆಗಳಲ್ಲಿ ಪಠ್ಯ ಹೊರತಾದ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಹಾಗಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಮಂಗಳೂರು ಬೀದರ್‌ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಹಾಗೂ ಅಧ್ಯಾಪಕರು ಒತ್ತಾಯಿಸಿದರು.  ‘ಜೀವ ವಿಜ್ಞಾನ ವಿಷಯದಲ್ಲಿ 13 ಹಾಗೂ ಗಣಿತ ವಿಷಯದಲ್ಲಿ 16ಕ್ಕೂ ಹೆಚ್ಚು ಪ್ರಶ್ನೆಗಳು ಕಳೆದ ವರ್ಷ ಪಠ್ಯಕ್ರಮದಿಂದ ಕೈಬಿಟ್ಟಿದ್ದ ಪಾಠಗಳಿಗೆ ಸಂಬಂಧಿಸಿವೆ. ಅಂತಹ ಪ್ರಶ್ನೆಗಳನ್ನು ಬಿಡಿಸಲು ಸಮಯ ವ್ಯರ್ಥವಾಗಿದೆ. ಇದರಿಂದ ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಸಾಕಾಗಲಿಲ್ಲ’ ಎಂದು ಹಲವು ವಿದ್ಯಾರ್ಥಿಗಳು ದೂರಿದರು. ‘ಆಯೋಗದ ವೆಬ್‌ಸೈಟ್‌ನಲ್ಲಿ ಕಡಿತಗೊಂಡ ಪಠ್ಯಕ್ರಮ ಹೊರತುಪಡಿಸಿ ಹೊಸ ಪಠ್ಯಕ್ರಮದ ಪ್ರಕಾರವೇ ಸಿಇಟಿ ಪರೀಕ್ಷೆಗಳು ನಡೆಯುತ್ತವೆ ಎಂದು ಪ್ರಕಟಿಸಲಾಗಿತ್ತು. ಈಗ ಗ್ರೇಸ್ ಅಂಕ ಕೊಟ್ಟರೆ ಪ್ರಯೋಜನವಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಾದರೆ ಪುನರ್ ಪರೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ‘ಅನುಮಾನಗಳು ಇದ್ದರೆ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸಲು ಏ.20ರಂದು ಕೆಇಎ ವೆಬ್‌ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು. ವಿಷಯ ತಜ್ಞರ ತಂಡ ಸಲಹೆಯ ನೀಡಿದ ನಂತರ ಪ್ರಾಧಿಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿದೆ. ಈ ವಿಷಯದಲ್ಲಿ ಆತಂಕಪಡುವ ಅಗತ್ಯ ಇಲ್ಲ’ ಎಂದರು. 

ಇಂದಿನ ವಿಷಯಗಳು: ಭೌತಶಾಸ್ತ್ರ ರಸಾಯನಶಾಸ್ತ್ರ (ಏ.19) ಪರೀಕ್ಷಾ ಸಮಯ: ಬೆಳಿಗ್ಗೆ 10.30–11.50 ಮಧ್ಯಾಹ್ನ 2.30–3.50 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT