ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಣಿಗಳ ಆರೈಕೆ–ನಿರ್ವಹಣೆ ಡಿಪ್ಲೊಮಾ ಕೋರ್ಸ್‌

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಲಿಕೆ; ಬೆಂಗಳೂರು ವಿ.ವಿ. ಮಾನ್ಯತೆ
Published 10 ಜೂನ್ 2024, 16:28 IST
Last Updated 10 ಜೂನ್ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ (ಅನಿಮಲ್‌ ಕೇರ್ ಅಂಡ್ ಮ್ಯಾನೇಜ್‌ಮೆಂಟ್‌) ವಿಷಯ ಕುರಿತ ಡಿಪ್ಲೊಮಾ ಕೋರ್ಸ್‌ ಆರಂಭಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅನುಮೋದನೆ ನೀಡಿದರು.

ಈ ಕೋರ್ಸ್‌ 10 ತಿಂಗಳ ಅವಧಿಯದ್ದಾಗಿರುತ್ತದೆ. ಮೃಗಾಲಯಗಳಲ್ಲಿ ವನ್ಯಜೀವಿಗಳ ಆರೈಕೆಗೆ ನುರಿತ ಸಿಬ್ಬಂದಿಯ ಅಗತ್ಯವಿದ್ದು, ಬೆಂಗಳೂರು ವಿಶ್ವವಿದ್ಯಾಲಯಗಳ ಮಾನ್ಯತೆಯೊಂದಿಗೆ ಬೆಂಗಳೂರಿನ ಲೈಫ್‌ ಸೈನ್ಸ್‌ ಎಜುಕೇಷನ್‌ ಟ್ರಸ್ಟ್‌ ಸಹಯೋಗದಲ್ಲಿ ಆರಂಭಿಸಲಾಗುವುದು ಎಂದು ಅವರು ವಿಕಾಸಸೌಧದಲ್ಲಿ ಸೋಮವಾರ ನಡೆದ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ವಿವರಿಸಿದರು.

ಈ ಡಿಪ್ಲೊಮಾ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಲಭಿಸುವಂತಿರಬೇಕು. ದೀರ್ಘಕಾಲ ಈ ಕೋರ್ಸ್‌ನ ಪ್ರಾಮುಖ್ಯ ಪಡೆಯುವಂತಿರಬೇಕು. ಇದಕ್ಕಾಗಿ ಪಠ್ಯಕ್ರಮ ಮತ್ತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಧಕ– ಬಾಧಕ ಚರ್ಚಿಸಿ, ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಣಿಗಳ ಆರೈಕೆ ಹಾಗೂ ನಿರ್ವಹಣೆ ಮಾಡಲು ಆಸಕ್ತ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ವನ್ಯಜೀವಿ ಮತ್ತು ಸಾಕುಪ್ರಾಣಿಗಳ ಸಂರಕ್ಷಣೆ, ನಿರ್ವಹಣೆ, ಆರೈಕೆ ಕುರಿತಂತೆ ಅಗತ್ಯ ಜ್ಞಾನ ಮತ್ತು ಕೌಶಲ ನೀಡುವ ಈ ಡಿಪ್ಲೊಮಾ ಕೋರ್ಸ್‌ ಪಡೆದವರು ಮೃಗಾಲಯಗಳಲ್ಲಿ, ಪುನರ್ವಸತಿ ಕೇಂದ್ರಗಳಲ್ಲಿ ಪ್ರಾಣಿ ಪಾಲಕರಾಗಿ ಕೆಲಸ ನಿರ್ವಹಿಸಬಹುದು. ಅದೇ ರೀತಿ ಖಾಸಗಿಯಾಗಿಯೂ ಸಾಕುಪ್ರಾಣಿಗಳ ಆರೈಕೆ ಕೇಂದ್ರಗಳನ್ನು ನಡೆಸಬಹುದು. ಶಾಲಾ, ಕಾಲೇಜುಗಳಲ್ಲಿ ಪ್ರಾಣಿ ಆರೈಕೆಯ ತರಬೇತಿ ನೀಡಬಹುದು ಎಂದು ಹೇಳಿದರು.

ಸಭೆಯ ಪ್ರಮುಖ ಅಂಶಗಳು:

*ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ, ಪಕ್ಷಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಒದಗಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು, ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಹರಿಸಲು ಒಪ್ಪಿಗೆ

*ಬನ್ನೇರುಘಟ್ಟ ಉದ್ಯಾನದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ತಿಂಗಳಿಗೆ ₹21,000 ವೇತನ ಮೀರಿದ 153 ಸಿಬ್ಬಂದಿಗೆ ಸಿಜಿಎಚ್‌ಎಸ್‌ ದರದಂತೆ ವೈದ್ಯಕೀಯ ವೆಚ್ಚ ಭರಿಸಲು ಅನುಮೋದನೆ

*ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಿರ್ಮಾಣದಲ್ಲಿ ಮಾಡಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಸ್ಯಾಟಲೈಟ್‌ ಕೇಂದ್ರವಾಗಿ ಕಾರ್ಯ ನಿರ್ವಹಣೆಗೆ ಒಪ್ಪಿಗೆ

*ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕರೆ ಜಮೀನು ಭೂಸ್ವಾಧೀನ ಮತ್ತು ಮೃಗಾಲಯದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನ ಊಟ ಪೂರೈಕೆಗೆ ಸಮ್ಮತಿ

ಇದೇ ತಿಂಗಳಿಂದ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಿಂಹ ಹುಲಿ ಸಫಾರಿಯ ಜತೆಗೆ ಜೂನ್‌ ಕೊನೆಗೆ ಚಿರತೆ ಸಫಾರಿಯನ್ನೂ ಆರಂಭಿಸಲು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಮತ್ಸ್ಯಾಗಾರ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಮತ್ತು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಮಂಡಿಸಲು ಅವರು ನಿರ್ದೇಶನ ನೀಡಿದರು.

ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೊ ಟಿಕೆಟ್‌ ಪರಿಚಯಿಸಿ ಸ್ಥಿರ ಕ್ಯಾಮರಾಗೆ ₹150 ಮತ್ತು ವಿಡಿಯೋ ಕ್ಯಾಮರಾಗೆ ₹300 ವಿಧಿಸಲು ಅನುಮತಿ ನೀಡಿದರು. ಅದೇ ರೀತಿ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಮತ್ಸ್ಯಾಗಾರಗಳನ್ನು ನಿರ್ಮಿಸಲು ಈಗಾಗಲೇ ನಡೆದಿರುವ ಪರಿಕಲ್ಪನೆ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತಿ ಮತ್ಸ್ಯಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.

ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳ ಸೋಂಕು ಇತ್ಯಾದಿಯಿಂದ ಸಾವಿಗೀಡಾಗದಂತೆ ಕ್ರಮವಹಿಸಲು ಪಶುವೈದ್ಯರ ನೇಮಕಾತಿ ಬಗ್ಗೆ ಚರ್ಚಿಸಿ ವೈದ್ಯರ ನೇಮಕಾತಿಗೆ ಅನುಮೋದನೆ ನೀಡಲಾಯಿತು. ಅಲ್ಲದೇ ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶು ವೈದ್ಯಾಧಿಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT