ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ: ಪ್ರಬಲ ಜಾತಿಯವರ ಪಾರುಪತ್ಯ

41 ವಿ.ವಿ.: ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣರದ್ದೇ ಪ್ರಾಬಲ್ಯ
Published 29 ಸೆಪ್ಟೆಂಬರ್ 2023, 23:24 IST
Last Updated 29 ಸೆಪ್ಟೆಂಬರ್ 2023, 23:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಪ್ರಬಲ ಜಾತಿಯವರೇ ಹೆಚ್ಚಿನ ಪ್ರಾತಿನಿಧ್ಯ ಪಡೆದುಕೊಂಡಿದ್ದಾರೆ.

ರಾಜ್ಯದ 41 ವಿಶ್ವವಿದ್ಯಾಲಯಗಳ ಕುಲಪತಿಗಳ ಜಾತಿವಾರು ವಿವರಗಳನ್ನು ಒಳಗೊಂಡ ದಾಖಲೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣ/ಸಾಮಾನ್ಯ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿ ಅವಕಾಶ ಪಡೆದಿದ್ದಾರೆ. ಹಾಗಾಗಿ, ಮುಂದಿನ ನೇಮಕಾತಿಗಳಲ್ಲಿ ಅವಕಾಶ ವಂಚಿತ ಸಮುದಾಯದ ಪ್ರಾಧ್ಯಾಪಕರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ 32 ಸೇರಿದಂತೆ ರಾಜ್ಯದ 41 ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ಖಾಲಿ ಇವೆ. ಹಾಲಿ ಇರುವ 37ರಲ್ಲಿ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣ/ಸಾಮಾನ್ಯ ಸಮುದಾಯದ 25 ಕುಲಪತಿಗಳು, ಪರಿಶಿಷ್ಟರೂ ಸೇರಿದಂತೆ ರಾಜ್ಯದ ಇತರೆ ಎಲ್ಲ ಜಾತಿಗಳೂ ಸೇರಿ 12 ಕುಲಪತಿಗಳು ಇದ್ದಾರೆ. ನಾಲ್ಕು ವಿಶ್ವವಿದ್ಯಾಲಯಗಳಲ್ಲೂ ಕುಲಪತಿ ಹುದ್ದೆಗಳು ಖಾಲಿಯಾಗುವ ಮೊದಲು ಅದೇ ಮೂರು ಜಾತಿಗಳಿಗೆ ಸೇರಿದವರೇ ಕುಲಪತಿಗಳಾಗಿದ್ದರು.

ಒಬಿಸಿ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಮುಸ್ಲಿಂ ಸೇರಿದಂತೆ ತಳ ಸಮುದಾಯಗಳಿಗೆ ಕುಲಪತಿಗಳ ನೇಮಕಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂಬ ಬೇಡಿಕೆಯೂ ಇದೆ.

‘ಅಧಿಕಾರಕ್ಕೆ ಬರುವ ಸರ್ಕಾರಗಳು ಸಾಮಾಜಿಕ ನ್ಯಾಯದ ಬಗ್ಗೆ ಚಿಂತಿಸುವುದೇ ಇಲ್ಲ. ತಮ್ಮ ಜಾತಿ,  ಸಿದ್ಧಾಂತಗಳಿಗೆ ಸರಿ ಹೊಂದುವಂತಹ ಕುಲಪತಿಗಳನ್ನೇ ಆಯ್ಕೆ ಮಾಡುತ್ತಾರೆ. ಅದಕ್ಕಾಗಿ ಶೋಧನಾ ಸಮಿತಿಗೂ ತಮಗೆ ಬೇಕಾದವರನ್ನೇ ನೇಮಿಸುತ್ತಾರೆ’ ಎನ್ನುತ್ತಾರೆ ವಿಶ್ರಾಂತ ಕುಲಪತಿ ಪಿ.ವಿ.ವೆಂಕಟರಾಮಯ್ಯ. 

‘ಶೋಧನಾ ಸಮಿತಿ ಶಿಫಾರಸು ಮಾಡಿದ ಮೂವರಲ್ಲೂ ತಮಗೆ ಬೇಕಾದವರನ್ನೇ ನೇಮಿಸಲು ರಾಜ್ಯಪಾಲರಿಗೆ ಮುಖ್ಯಮಂತ್ರಿ ಶಿಫಾರಸು ಮಾಡುತ್ತಾರೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹಾಗೂ 2020ರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲೂ ಮುಖ್ಯಮಂತ್ರಿ ಜತೆ ಚರ್ಚಿಸಿಯೇ ರಾಜ್ಯಪಾಲರು ಕುಲಪತಿಗಳ ಆಯ್ಕೆ ಅಂತಿಮಗೊಳಿಸಬೇಕು ಎನ್ನುವ ನಿಯಮವಿದೆ. ನಿಯಮ ಬಳಸಿಕೊಳ್ಳುವ ಮುಖ್ಯಮಂತ್ರಿ ತಮ್ಮ ಜಾತಿಗಳ ಪ್ರಾಧ್ಯಾಪಕರ ಹೆಸರುಗಳನ್ನು ಶಿಫಾರಸು ಮಾಡುತ್ತಾ ಬಂದಿದ್ದಾರೆ. ಹಾಗಾಗಿ, ರಾಜ್ಯದಲ್ಲಿ ಅಧಿಕಾರ ನಡೆಸಿದ ಮುಖ್ಯಮಂತ್ರಿಯಾದ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗುತ್ತಿದ್ದಾರೆ’ ಎನ್ನುವುದು ಅವರ ವಿವರಣೆ. 

‘ಕುಲಪತಿಗಳ ನೇಮಕಾತಿಯಲ್ಲಿ ಜಾತಿ ಹಾಗೂ ಹಣವೇ ಪ್ರಧಾನವಾಗಿದೆ. ಉಳಿದದ್ದೆಲ್ಲವೂ ಗೌಣವಾಗಿದೆ. ಇದರಿಂದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ತಮ್ಮ ಘನತೆ ಕಳೆದುಕೊಳ್ಳುತ್ತಿವೆ’ ಎನ್ನುತ್ತಾರೆ ವಿಶ್ವವಿದ್ಯಾಲಯಗಳ ಪ್ರತಿಭಾವಂತ ಪ್ರಾಧ್ಯಾಪಕರು. 

ಮುಸ್ಲಿಂ, ಕ್ರಿಶ್ಚಿಯನ್ನರಿಗಿಲ್ಲ ಒಂದೂ ಸ್ಥಾನ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಸಮುದಾಯದ ಒಬ್ಬರಿಗೂ ಕುಲಪತಿ ಸ್ಥಾನ ದೊರೆತಿಲ್ಲ.

ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಒಂದು ಸ್ಥಾನವನ್ನಾದರೂ ಸಮುದಾಯಕ್ಕೆ ನೀಡಬೇಕು ಎಂದು ಮುಸ್ಲಿಂ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ಜಾತಿ;ಕುಲಪತಿಗಳ ಸಂಖ್ಯೆ

ಲಿಂಗಾಯತ;11

ಒಕ್ಕಲಿಗ;07

ಸಾಮಾನ್ಯ/ಬ್ರಾಹ್ಮಣ;07

ಪರಿಶಿಷ್ಟ ಜಾತಿ;05

ಪರಿಶಿಷ್ಟ ಪಂಗಡ;01

ಹಿಂದುಳಿದ ವರ್ಗಗಳು;06

ಖಾಲಿ ಇರುವ ಸ್ಥಾನಗಳು;04

ಒಟ್ಟು;41

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT