ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಭಾಷೆಗಳಲ್ಲಿ ಗಾಂಧಿ ಚಿತ್ರ

Last Updated 23 ಫೆಬ್ರುವರಿ 2019, 5:10 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಗಾಂಧಿ ಗಾಳಿ’ ಬೀಸುತ್ತಿರುವಂತಿದೆ. ಒಂದೆಡೆ 11ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಾಂಧಿ ಕುರಿತ ನಾಲ್ಕು ಚಿತ್ರಗಳ ಪ್ರದರ್ಶನ ನಡೆಯುತ್ತಿರುವಂತೆಯೇ, ಇನ್ನೊಂದೆಡೆ ‘ಮೋಹನದಾಸ್‌’ ಎನ್ನುವ ಹೊಸ ಚಿತ್ರವನ್ನು ಕನ್ನಡ ಸಹಿತ ಮೂರು ಭಾಷೆಗಳಲ್ಲಿ ನಿರ್ಮಿಸಿ, ನಿರ್ದೇಶಿಸುವುದಾಗಿ ಕನ್ನಡದ ಹೆಸರಾಂತ ನಿರ್ದೇಶಕ ಪಿ.ಶೇಷಾದ್ರಿ ಪ್ರಕಟಿಸಿದ್ದಾರೆ.

‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ಶೇಷಾದ್ರಿ, ‘ಕನ್ನಡದ ಖ್ಯಾತ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿ ಅವರು ಬರೆದಿರುವ ಪಾಪು ಗಾಂಧಿ ಕೃತಿಯನ್ನು ಆಧರಿಸಿ ಸಿನಿಮಾ ನಿರ್ಮಿಸಲಾಗುತ್ತಿದೆ. ಗಾಂಧಿ ಜೀವನದ ವಿವಿಧ ಹಂತ ಮತ್ತು ಹೋರಾಟಗಳನ್ನು ಆಧರಿಸಿ ಹಲವು ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಆದರೆ ಗಾಂಧಿಯ ಬಾಲ್ಯವನ್ನು ಕುರಿತು ಯಾವುದೇ ಸಿನಿಮಾ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಗಾಂಧಿ ಬಾಲ್ಯದ (6ರಿಂದ 14 ವರ್ಷ ವಯಸ್ಸು) ಘಟನೆಗಳನ್ನು ಆಧರಿಸಿ ಚಿತ್ರಕಥೆ ಬರೆದಿದ್ದೇನೆ. ಗಾಂಧಿ ಜನನದ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲ ಪ್ರೇಕ್ಷಕರಿಗೂ ಇದು ತಲುಪುವಂತಾಗಲು ಇಂಗ್ಲಿಷ್‌, ಹಿಂದಿ ಮತ್ತು ಕನ್ನಡದಲ್ಲಿ ಸಿನಿಮಾ ನಿರ್ಮಾಣವಾಗಲಿದೆ’ ಎಂದು ತಿಳಿಸಿದ್ದಾರೆ.

‘ಗಾಂಧೀಜಿಯವರ ಬಾಲ್ಯ ಎಲ್ಲ ಮಕ್ಕಳ ಬಾಲ್ಯದಂತೆಯೂ ಇತ್ತು. ಹುಟ್ಟುತ್ತಲೇ ಮಹಾತ್ಮ ಆದವರಲ್ಲ. ಆದರೆ ಬಾಲ್ಯದಲ್ಲಿ ತಪ್ಪುಗಳನ್ನು ಮಾಡುತ್ತಲೇ ತಿದ್ದಿಕೊಂಡು ಬೆಳೆದವರು ಗಾಂಧಿ. ಇದನ್ನು ಮಕ್ಕಳಿಗೆ ಹೇಳುವುದು ನನ್ನ ಉದ್ದೇಶ. ಮೂರು ವರ್ಷದ ಹಿಂದೆಯೇ ಈ ಆಲೋಚನೆ ಬಂತು. ಗಾಂಧಿ ಕಾಲದ ಸನ್ನಿವೇಶಗಳನ್ನು ಮರುಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಈ ಚಿತ್ರ ದೊಡ್ಡ ಬಜೆಟ್‌ಅನ್ನು ಬಯಸುತ್ತಿದೆ.

ಕೇವಲ ನಮ್ಮ ನಿರ್ಮಾಣ ಸಂಸ್ಥೆಯಿಂದ ಇದು ಸಾಧ್ಯವಿಲ್ಲ. ಅದಕ್ಕೆಂದೇ ಸಹನಿರ್ಮಾಪಕರ ತಲಾಷ್‌ ನಡೆದಿದೆ. ಮೂರೂ ಭಾಷೆಗಳಲ್ಲಿ ಮಾಡಿದರೆ ಗುಜರಾತಿ, ಹಿಂದಿ ಮತ್ತು ಕನ್ನಡದ ನಟನಾ ಪ್ರತಿಭೆಗಳನ್ನು ಬಳಸಿಕೊಳ್ಳಬಹುದು. ಗಾಂಧಿ ಚಿತ್ರದ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿರುವ ನಟ ಬೆನ್‌ ಕಿಂಗ್‌ಸ್ಲೇ ಅವರನ್ನೂ ಕರೆತರುವ ಆಲೋಚನೆ ಇದೆ’ ಎಂದು ಶೇಷಾದ್ರಿ ತಿಳಿಸಿದರು.

ಜೂನ್‌ನಲ್ಲಿ ಶೂಟಿಂಗ್‌ ಶುರುವಾಗಿ, ಅಕ್ಟೋಬರ್‌ 2ಕ್ಕೆ ಚಿತ್ರವನ್ನು ಬಿಡುಗಡೆ ಮಾಡಬೇಕು. ಕಳೆದ ವರ್ಷ ಎನ್‌ಎಫ್‌ಡಿಸಿ ಫಿಲಂ ಬಜಾರ್‌ಗೆ ಪ್ರಸ್ತಾಪ ಸಲ್ಲಿಸಿದ್ದರೂ, ಅದು ಸ್ವೀಕೃತವಾಗಲಿಲ್ಲ. ಚಿತ್ರಕಥೆಯನ್ನು ಈಗಾಗಲೆ ಆಸ್ಟ್ರೇಲಿಯಾದ ಚಿತ್ರಕಥೆ ತಜ್ಞ ಕ್ಲೇರ್‌ ಡಾಬಿನ್‌ ಓದಿ ಸಲಹೆಗಳನ್ನು ನೀಡಿದ್ದಾರೆ. ಈ ವರ್ಷವೂ ಅವರು ಬೆಂಗಳೂರು ಚಿತ್ರೋತ್ಸವಕ್ಕೆ ಬರಲಿದ್ದು ಮತ್ತೆ ಚಿತ್ರಕಥೆಯ ಪರಿಷ್ಕರಣೆ ನಡೆ
ಯಲಿದೆ.

ತಾರಾಗಣಕ್ಕೆ ಬೆಂಗಳೂರಿನ ಶಾಲಾ ಮಕ್ಕಳ ಹುಡುಕಾಟ ನಡೆದಿದೆ. ಶೇಕಡಾ 90ರಷ್ಟು ಶೂಟಿಂಗ್‌ ಗುಜರಾತ್‌ನಲ್ಲೇ ನಡೆಯಲಿದೆ. ಮೋಹನದಾಸ, ಪೋರ್‌ಬಂದರ್‌ನಲ್ಲಿ ಮೊದಲ ಆರು ವರ್ಷ ಬೆಳೆದ ಸ್ಥಳಗಳಲ್ಲಿ ಶೂಟಿಂಗ್‌ಗೆ ಅನುಮತಿ ಪಡೆಯಲಾಗಿದೆ.

ರಾಜ್‌ಕೋಟ್‌ನಲ್ಲಿ ಬೆಳೆದ ಮನೆ, ಕಲಿತ ಆಲ್ಫ್ರೆಡ್‌ ಹೈಸ್ಕೂಲ್‌ಗಳಲ್ಲೂ ಶೂಟಿಂಗ್‌ ನಡೆಸಲಾಗುವುದು.150 ವರ್ಷದ ಹಿಂದಿನ ಕಾಲವನ್ನು ಮರುಸೃಷ್ಟಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸ್ವಲ್ಪ ಗ್ರಾಫಿಕ್‌ ಕೆಲಸದ ಅಗತ್ಯವೂ ಇದೆ’ ಎಂದು ಶೇಷಾದ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT