ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಾಗ ಒತ್ತುವರಿ–ಶಾಲೆ ನಿರ್ಮಾಣ: ನೋಟಿಸ್‌

Published 4 ಏಪ್ರಿಲ್ 2024, 22:30 IST
Last Updated 4 ಏಪ್ರಿಲ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶ ಬಳಕೆಗೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಸೂರ್ಯೋದಯ ಎಜುಕೇಷನಲ್ ಟ್ರಸ್ಟ್ ಒತ್ತುವರಿ ಮಾಡಿ ಶಾಲೆ ನಿರ್ಮಿಸಿದೆ’ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ತಿರುಪಾಳ್ಯದ ಟಿ.ಎನ್.ಸಂಪಂಗಿ ರಾಮರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರ ಪರ ವಕೀಲೆ ಡಿ.ಸುಧಾ ಅವರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಆನೇಕಲ್‌ ತಹಶೀಲ್ದಾರ್‌ ಮತ್ತು ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎನ್ನಲಾದ ತಿರುಪಾಳ್ಯ ನಿವಾಸಿ ಟಿ.ಕೃಷ್ಣ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಏನಿದೆ ಅರ್ಜಿಯಲ್ಲಿ?: ತಿರುಪಾಳ್ಯ ಗ್ರಾಮದ ಸರ್ವೇ ನಂ 2/15ರಲ್ಲಿನ ಒಟ್ಟು 8 ಎಕರೆ 12 ಗುಂಟೆ ಜಮೀನನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ರಸ್ತೆ ಮತ್ತು ಮತ್ತು ಕರ್ನಾಟಕ ರಾಜ್ಯ ವಿದ್ಯುತ್‌ ಪ್ರಸರಣ ನಿಗಮ ನಿಯಮಿತಕ್ಕೆ (ಕೆಪಿಟಿಸಿಎಲ್‌) ಮೀಸಲು ಇರಿಸಲಾಗಿತ್ತು. ಅದರಲ್ಲಿ ಎರಡು ಎಕರೆ ಜಮೀನನ್ನು ಟಿ.ಕೃಷ್ಣ ಒತ್ತವರಿ ಮಾಡಿದ್ದಾರೆ. ಸೂರ್ಯೋದಯ ಎಜುಕೇಷನ್‌ ಟ್ರಸ್ಟ್‌ ಹೆಸರಿನಡಿ ಶಾಲೆ ಹಾಗೂ ದೇವಸ್ಥಾನ  ನಿರ್ಮಿಸಿ, ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

‘ಸರ್ಕಾರಿ ಜಮೀನು ಒತ್ತುವರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಒತ್ತುವರಿ ತೆರವುಗೊಳಿಸಬೇಕು. ಒತ್ತುವರಿಯಾಗಿರುವ ಜಾಗದಲ್ಲಿನ ಶಾಲೆ ಮುಂದುವರಿಯದಂತೆ ಹಾಗೂ ಮುಂದಿನ ಯಾವುದೇ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಒತ್ತುವರಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT