ಬೆಂಗಳೂರು: ಬಡವರು ಮತ್ತು ಮಧ್ಯಮ ವರ್ಗದ ವಿರೋಧಿ ಬಿಜೆಪಿಯು ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಜನರು ಇಂತಹ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಎಂಟಿಸಿಗೆ 100 ನೂತನ ಬಿಎಸ್–6 ಬಸ್‌ಗಳನ್ನು ಗುರುವಾರ ನೀಡಿದ ನಂತರ ಅವರು ಮಾತನಾಡಿದರು.
ಬಿಜೆಪಿ ವಿರೋಧಿಸಿದಷ್ಟೂ ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಎಂತಹ ಸ್ಥಿತಿ ಎದುರಾದರೂ ಹಿಂದೆ ಸರಿಯುವುದಿಲ್ಲ. ಸರ್ಕಾರದ ಮೇಲೆ ಜನರು ಭರವಸೆ ಇಡಬೇಕು ಎಂದರು.
‘ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗಿದೆ. ಬೆಂಗಳೂರು ನಗರದ ಜನರು, ಶ್ರಮಿಕ ವರ್ಗದ ಅನುಕೂಲಕ್ಕೆ ತಕ್ಕಂತೆ ಮೊದಲ ಹಂತದಲ್ಲಿ 100 ನೂತನ ಬಸ್‌ಗಳನ್ನು ಬಿಎಂಟಿಸಿಗೆ ನೀಡಿದ್ದೇವೆ. ಹಂತಹಂತವಾಗಿ 840 ಬಸ್‌ಗಳು ಸೇರ್ಪಡೆಯಾಗಲಿವೆ. ನಮ್ಮ ಸರ್ಕಾರ ಬಂದ ಮೇಲೆ ನಾಲ್ಕು ಬಾರಿ ಹೊಸ ಬಸ್‌ಗಳನ್ನು ಖರೀದಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಸತಿ ಸಚಿವ ಜಮೀರ್ ಅಹಮದ್ ಖಾನ್, ಇಂಧನ ಸಚಿವ ಕೆ.ಜೆ. ಜಾರ್ಜ್, ಶಾಸಕ ರಿಜ್ವಾನ್ ಅರ್ಷದ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮತ್ತಿತರರು ಉಪಸ್ಥಿತರಿದ್ದರು.