ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಅತಿಥಿ ಉಪನ್ಯಾಸಕರ ಹೋರಾಟ: ಭರವಸೆಗೆ ತಿರಸ್ಕಾರ, ಪಾದಯಾತ್ರೆಗೆ ನಿರ್ಧಾರ

Published 30 ಡಿಸೆಂಬರ್ 2023, 14:32 IST
Last Updated 30 ಡಿಸೆಂಬರ್ 2023, 14:32 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ನೀಡಿದ ಭರವಸೆಗಳನ್ನು ತಿರಸ್ಕರಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದು, ಜ.1ರಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಸೇವಾ ಭದ್ರತೆಗೆ ಆಗ್ರಹಿಸಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಜ.1ರಂದು ಸಿದ್ಧಗಂಗಾ ಮಠದ ಆವರಣದಲ್ಲಿ ಸಿದ್ಧಗಂಗಾ ಶ್ರೀಗಳು ಚಾಲನೆ ನೀಡಲಿದ್ದಾರೆ. ಪ್ರತಿದಿನ 20 ಕಿ.ಮೀ. ಸಾಗಿದ ನಂತರ ಬೆಂಗಳೂರಿನ ಸ್ವಾತಂತ್ರ್ಯಾ ಉದ್ಯಾನದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಅತಿಥಿ ಉಪನ್ಯಾಸಕರ ಸಂಘ ನಿರ್ಧರಿಸಿದೆ.

‘ಉನ್ನತ ಶಿಕ್ಷಣ ಸಚಿವರು ನೀಡಿದ ನಾಲ್ಕೂ ಭರವಸೆಗಳು ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರಿದಂತಿವೆ. ಸೇವಾ ಭದ್ರತೆ ಇಲ್ಲದ ಭರವಸೆಗಳಿಂದ ಯಾವ ಪ್ರಯೋಜನವೂ ಇಲ್ಲ. 60 ವರ್ಷಕ್ಕೆ ₹5 ಲಕ್ಷ ಧನಸಹಾಯದ ಭರವಸೆ ಇದೆ. ಆದರೆ, ಸಹಾಯಕ ಪ್ರಾಧ್ಯಾಪಕರ ನೇಮಕ, ವರ್ಗಾವಣೆಯಿಂದ ಕಾರ್ಯಭಾರ ಕಡಿಮೆಯಾಗುವುದು, ಪ್ರತಿವರ್ಷ ನಡೆಸುವ ಕೌನ್ಸೆಲಿಂಗ್‌ನಿಂದ ಬಹಳಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಸಹಾಯಧನ ನೀಡುವ ಮೊದಲು 60 ವರ್ಷದವರೆಗೆ ಸೇವಾಭದ್ರತೆಯ ಭರವಸೆ ನೀಡಬೇಕು’ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು. ಅಂದು ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಕಾಯಂ ಮಾಡಲು ಏಕೆ ಮೀನಮೇಷ ಎಂದು ಕಲ್ಮನಿ ಪ್ರಶ್ನಿಸಿದರು.

ವಾರ್ಷಿಕ ₹5 ಲಕ್ಷಗಳವರೆಗಿನ ಆರೋಗ್ಯವಿಮೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅದಕ್ಕೆ ಪ್ರತಿ ತಿಂಗಳು ಅತಿಥಿ ಉಪನ್ಯಾಸಕರ ಗೌರವಧನದಲ್ಲಿ ₹400 ಕಡಿತ ಮಾಡಲಾಗುತ್ತದೆ. 10 ತಿಂಗಳು ಕೆಲಸ. ಇನ್ನೂ 2 ತಿಂಗಳು ಯಾರು ಕಟ್ಟುತ್ತಾರೆ? ತಿಂಗಳಿಗೆ ಒಂದು ರಜೆ ಸೌಲಭ್ಯ ಕಲ್ಪಿಸಲಾಗಿದೆ. ಅದರಲ್ಲೂ ಸ್ಪಷ್ಟತೆ ಇಲ್ಲ. ಬಹಳಷ್ಟು ಉಪನ್ಯಾಸಕರು ಮನೆ ಬಾಡಿಗೆ ಕಟ್ಟಲಾಗದೆ, ಮಕ್ಕಳ ಶಾಲಾ ಶುಲ್ಕ ಭರಿಸಲಾಗದೆ ಪರಿತಪಿಸುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಸೇವಾಭದ್ರತೆ ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT