ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಕ್ಸ್‌ ಪೋಸ್ಟ್‌: ವಿಜಯೇಂದ್ರ ಭಾಷಾ ವೈಖರಿಗೆ ಹೈಕೋರ್ಟ್‌ ಕಿಡಿ

Published 21 ಜೂನ್ 2024, 16:31 IST
Last Updated 21 ಜೂನ್ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾತನಾಡುವಾಗ ಗೌರವದ ಭಾಷೆ ಬಳಸಬೇಕು. ವಿರೋಧ ಪಕ್ಷದವರು ಎಂದರೆ ಶತ್ರುಗಳಲ್ಲ. ಈಗ ಒಂದು ಪಕ್ಷ ಅಧಿಕಾರದಲ್ಲಿದ್ದರೆ ಮುಂದಿನ ಬಾರಿ ಮತ್ತೊಂದು ಪಕ್ಷದವರು ಅಧಿಕಾರಕ್ಕೆ ಬರಬಹುದು. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವವರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ವಿಶೇಷವಾಗಿ ಟ್ವೀಟ್‌ಗಳು ಸ್ವೀಟ್‌ ಆಗಿರಬೇಕೆ ಹೊರತು ಮತ್ತೊಬ್ಬರ ಮನಸ್ಸಿಗೆ ಹುಳಿ ಹಿಂಡುವಂತಿರಬಾರದು’ ಎಂದು ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತು ಅವಹೇಳನಕಾರಿ ಪೋಸ್ಟ್‌ ಹಂಚಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ದಾಖಲಿಸಲಾಗಿರುವ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್‌ ಮಾಕನೂರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಶುಕ್ರವಾರ ವಿಚಾರಣೆ ನಡೆಸಿದರು.  

ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌ ಅವರ ವಾದ ಆಲಿಸಿದ ನ್ಯಾಯಪೀಠ, ‘ಯಾರೇ ಆಗಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರಂತಹ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರ ಬಗ್ಗೆ ದುರ್ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು. ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಹಾಗೂ ಸಂಯಮ ಇರಬೇಕು. ಚುನಾವಣೆ ವೇಳೆ ಜನರಿಗೆ ಜ್ವರ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಏನೋನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ನಾಲಗೆ ಮತ್ತು ಮೆದುಳಿನ ನಡುವಿನ ಸೇತುವೆ ಕುಸಿಯಬಾರದು’ ಎಂದು ಕಿವಿಮಾತು ಹೇಳಿತು.

ಇದೇ ವೇಳೆ ‘ತನಿಖೆ ಮುಂದುವರಿಯಲು ಅನುಮತಿ ನೀಡಬೇಕು’ ಎಂಬ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ಅವರ ಕೋರಿಕೆಯನ್ನು ಒಪ್ಪದ ನ್ಯಾಯಪೀಠ, ‘ಈಗಾಗಲೇ ಚುನಾವಣೆ ಮುಗಿದಿದೆ. ಎಲ್ಲರ ಮೇಲೆ ತನಿಖೆ ನಡೆಸಬೇಕು ಎಂದಾದರೆ ಹೇಗೆ? ಎಲ್ಲರನ್ನೂ ಕಸ್ಟಡಿಗೆ ಕೇಳುವುದು ಸರಿಯಾದ ದಾರಿಯಲ್ಲ. ಹೀಗೆ ಮಾಡುತ್ತಾ ಹೋದರೆ ನಾಳೆ ಹೊರಗಡೆ ಇರುವವರಿಗಿಂತ ಜೈಲು ಹಾಗೂ ಕಸ್ಟಡಿಯಲ್ಲಿ ಇರುವವರ ಸಂಖ್ಯೆಯೇ ಹೆಚ್ಚಿರುತ್ತದೆ. ಅವರನ್ನು ಪೋಷಿಸುವ ಖರ್ಚನ್ನು ಯಾರು ಕೊಡುತ್ತಾರೆ’ ಎಂದು ಪ್ರಶ್ನಿಸಿತು.

‘ಹೀನ ಅಪರಾಧ ಕೃತ್ಯಗಳನ್ನು ಎಸಗಿದ್ದವರನ್ನು ಮಾತ್ರವೇ ಕಸ್ಟಡಿಗೆ ಕೇಳುವುದು ಸಮಂಜಸ’ ಎಂದು ಹೇಳಿದ ನ್ಯಾಯಪೀಠ ಪ್ರಕರಣದ ಪ್ರತಿವಾದಿಯಾದ ಮಲ್ಲೇಶ್ವರ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT