ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ಞೆ ಇರಿಸಿಕೊಂಡು ಮಾತನಾಡಿ: ಈಶ್ವರಪ್ಪಗೆ ಹೈಕೋರ್ಟ್ ತಪರಾಕಿ

Published 16 ಫೆಬ್ರುವರಿ 2024, 14:39 IST
Last Updated 16 ಫೆಬ್ರುವರಿ 2024, 14:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾರಣಿಗಳು ತಾವು ಬಳಸುವ ಭಾಷೆಯ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಖಡಕ್‌ ತಾಕೀತು ಮಾಡಿರುವ ಹೈಕೋರ್ಟ್, ‘ದೇಶ ವಿಭಜನೆಯ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು’ ಎಂದು ಹೇಳಿರುವುದಾಗಿ ಆರೋಪಿಸಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದೆ.

‘ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಮುಂದಿನ ಕಾನೂನು ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಕೋರಿ ಕೆ.ಎಸ್‌.ಈಶ್ವರಪ್ಪ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು.

ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ‘ನಮ್ಮ ರಾಜಕೀಯ ನಾಯಕರು ಯಾಕೆ ಒಳ್ಳೆಯ ಭಾಷೆ ಏಕೆ ಬಳಸುತ್ತಿಲ್ಲ?, ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ‌ ಪ್ರತಿಬಿಂಬಿಸುವುದಿಲ್ಲ? ಈ ರೀತಿ ಮಾತನಾಡಿ ಅದ್ಯಾಕೆ ಭಾಷೆಯ ಮೇಲೆ ದೌರ್ಜನ್ಯ ಎಸಗುತ್ತಾರೆ‘ ಎಂದು ಖಾರವಾಗಿ ಪ್ರಶ್ನಿಸಿದರು.

‘ಕರ್ನಾಟಕ ವಿವಿಧ ಸಿದ್ಧಾಂತಗಳ ಜನರನ್ನು ಮಡಿಲಲ್ಲಿ ಇಟ್ಟುಕೊಂಡಿರುವ ರಾಜ್ಯ. ರಾಜಕಾರಣಿಗಳು ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇಟ್ಟುಕೊಂಡಿರಬೇಕು. ತಮ್ಮ ಮಾತುಗಳನ್ನು ಶಾಲಾ ಮಕ್ಕಳೂ ಗಮನಿಸುತ್ತಿರುತ್ತಾರೆ ಎಂಬ ಅರಿವಿರಬೇಕು‘ ಎಂದು ಎಚ್ಚರಿಸಿದರು. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ ಶ್ಯಾಮ್‌ ಹಾಜರಿದ್ದರು.

ಪ್ರಕರಣವೇನು?: ‘ದಕ್ಷಿಣ ಭಾರತವನ್ನು ‍ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡುವಂತೆ ಕೇಳಬೇಕಾದೀತು’ ಎಂಬ ಸಂಸದ ಡಿ.ಕೆ.ಸುರೇಶ್‌ ಅವರ ಮಾತಿಗೆ ಪ್ರತಿಕ್ರಿಯಿಸಿದ್ದ ಈಶ್ವರಪ್ಪ, ‘ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ವಿನಯ ಕುಲಕರ್ಣಿ ದೇಶ ವಿಭಜನೆಯ ಮಾತುಗಳನ್ನಾಡಿದ್ದಾರೆ. ಈ ರೀತಿ ಮಾತನಾಡುವ ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು’ ಎಂದು ಹೇಳಿದ್ದಾಗಿ ಆರೋಪಿಸಿ ದಾವಣಗೆರೆಯ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪೊಲೀಸರು 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT