ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಭರಣ ಮಳಿಗೆಗಳ ಬೆಳಕಿನ ಪ್ರಖರತೆ: ಸರ್ಕಾರ–ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌

ಮಲ್ಲೇಶ್ವರ: ಆಭರಣ ಮಳಿಗೆಗಳ ಬೆಳಕಿನ ಪ್ರಖರತೆ
Published 12 ಫೆಬ್ರುವರಿ 2024, 16:30 IST
Last Updated 12 ಫೆಬ್ರುವರಿ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲ್ಲೇಶ್ವರ ಸಂಪಿಗೆ ರಸ್ತೆಯಲ್ಲಿನ ಆಭರಣ ಮಳಿಗೆಗಳು ಪ್ರಕಾಶಮಾನ ಎಲ್‌ಇಡಿ ದೀಪಗಳ ಡಿಜಿಟಲ್‌ ನಾಮಫಲಕ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿವೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹೈಕೋರ್ಟ್‌ ವಕೀಲೆ ದೀಕ್ಷಾ ಎನ್‌.ಅಮೃತೇಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ, ಬಿಬಿಎಂಪಿ ಮುಖ್ಯ ಆಯುಕ್ತ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಹಾಗೂ ಮಲ್ಲೇಶ್ವರ ಸಂಚಾರ ಉತ್ತರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಅರ್ಜಿದಾರರ ಪರ ವಕೀಲ ಎನ್‌.ಪಿ.ಅಮೃತೇಶ್ ವಾದ ಮಂಡಿಸಿದರು.

ಅರ್ಜಿಯಲ್ಲಿ ಏನಿದೆ?: ಸಂಪಿಗೆ ರಸ್ತೆಯಲ್ಲಿರುವ ಎವಿಆರ್‌ ಸ್ವರ್ಣ ಮಹಲ್‌, ಓಆರ್‌ಆರ್‌ಎ, ತನಿಷ್ಕ್‌ ಹಾಗೂ ಇತರ ಚಿನ್ನಾಭರಣ ಮಳಿಗೆಗಳು ಹೆಚ್ಚಿನ ಹೊಳಪಿನ ಎಲ್‌ಇಡಿ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಿವೆ. ಇವುಗಳನ್ನು ನೆಲಮಟ್ಟದಿಂದ ಬಹಳಷ್ಟು ಎತ್ತರಕ್ಕೆ ಮುಖ್ಯರಸ್ತೆಗೆ ಮುಖ ಮಾಡಿ ಇರಿಸಲಾಗಿದೆ. ಇವು ಸುರಕ್ಷತಾ ಮಿತಿಗಿಂತ ಹೆಚ್ಚಿನ ಬೆಳಕನ್ನು ಹೊರಸೂಸುತ್ತಿವೆ. ಇದರಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರಿಗೆ, ಅದರಲ್ಲೂ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ವಾಹನ ಸವಾರರಿಗೆ ಮತ್ತು ಚಾಲಕರಿಗೆ ಅಪಾಯ ಎದುರಾಗುತ್ತಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಅಧ್ಯಯನಗಳ ಪ್ರಕಾರ ಎಲ್‌ಇಡಿ ಜಾಹೀರಾತು ಫಲಕಗಳಿಂದ ಹೊರಹೊಮ್ಮುವ ಪ್ರಕಾಶಮಾನ ಬೆಳಕು, ಜನರ ದೈಹಿಕ, ಮಾನಸಿಕ ಆರೋಗ್ಯ ಮತ್ತು ಪ್ರಾಣಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಬಿಬಿಎಂಪಿ ಜಾಹೀರಾತು ಅಧಿನಿಯಮ-2021ರ ಅಡಿಯಲ್ಲಿ ಎಲ್‌ಇಡಿ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಲಾಗಿದೆ. ಆದರೆ, ಈ ಮಾರ್ಗಸೂಚಿಗೆ ವಿರುದ್ಧವಾಗಿ ಅರ್ಜಿಯಲ್ಲಿನ ಪ್ರತಿವಾದಿ ಮಳಿಗೆಗಳು ಜಾಹೀರಾತು ಫಲಕಗಳನ್ನು ಅಳವಡಿಸಿವೆ’ ಎಂದು ಆಕ್ಷೇಪಿಸಲಾಗಿದೆ.

‘ಎಲ್‌ಇಡಿ ದೀಪಗಳ ಡಿಜಿಟಲ್‌ ಹೊರಾಂಗಣ ಜಾಹೀರಾತಿಗಾಗಿ ಸುರಕ್ಷತಾ ಮಾನದಂಡ ಜಾರಿಗೊಳಿಸಬೇಕಿದೆ. ಈ ಕುರಿತಂತೆ ಕ್ರಮ ಜರುಗಿಸಲು ಕೋರಿ 2023ರ ಆಗಸ್ಟ್‌ 21ಮತ್ತು ನವೆಂಬರ್ 4ರಂದು ಅರ್ಜಿದಾರರು ಪ್ರತಿವಾದಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಪ್ರತಿವಾದಿಗಳು ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಅರ್ಜಿದಾರರ ಮನವಿ ಪರಿಗಣಿಸಿ ಎಲ್‌ಇಡಿ ನಾಮಫಲಕ ಹಾಗೂ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT