ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ ದೇಗುಲ: ಉಪಾಧಿವಂತರು, ವಿದ್ವಾಂಸರನ್ನು ಬದಲಿಸಿದ್ದ ಸರ್ಕಾರದ ಆದೇಶ ರದ್ದು

ಉಪಾಧಿವಂತರು–ವಿದ್ವಾಂಸರ ಬದಲಾವಣೆ ಪ್ರಶ್ನಿಸಿದ ಅರ್ಜಿ
Published 24 ಜನವರಿ 2024, 16:08 IST
Last Updated 24 ಜನವರಿ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಗೋಕರ್ಣದ ‘ಶ್ರೀ ಮಹಾಬಲೇಶ್ವರ ದೇವಸ್ಥಾನ‘ದ ಆಡಳಿತ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ರಚನೆಯಾಗಿದ್ದ ಮೇಲ್ವಿಚಾರಣಾ ಸಮಿತಿಯಲ್ಲಿನ ಇಬ್ಬರು ಉಪಾಧಿವಂತರು ಮತ್ತು ಇಬ್ಬರು ವಿದ್ವಾಂಸರನ್ನು ಬದಲಾಯಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಸಂಬಂಧ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹೊಸನಗರದ ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಹೆಗಡೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮೊರೆಹೋಗಿ ಸೂಕ್ತ ಆದೇಶ ಪಡೆಯಲು ಈ ತೀರ್ಪು ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿ ಅಡ್ಡಿ ಉಂಟು ಮಾಡುವುದಿಲ್ಲ’ ಎಂದೂ ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

‘ಅರ್ಜಿದಾರರೇ ಸುಪ್ರೀಂ ಕೋರ್ಟ್‌ನಲ್ಲಿ ಬದಲಾವಣೆಯ ಆದೇಶವನ್ನು ಪ್ರಶ್ನೆ ಮಾಡಬಹುದಿತ್ತು’ ಎಂಬ ರಾಜ್ಯ ಸರ್ಕಾರದ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ‘ಇದು ಸರ್ಕಾರದಿಂದಲೇ ಆಗಿರುವ ದೋಷ. ಸರ್ಕಾರ ಸುಪ್ರೀಂ ಕೋರ್ಟ್‌ನ ಅನುಮತಿ ಪಡೆಯಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಲು ಪ್ರಯತ್ನಿಸಿದೆ‘ ಎಂದು ಹೇಳಿದೆ.

‘ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಸಾಂವಿಧಾನಿಕ ನ್ಯಾಯಾಲಯಗಳು ಎಲ್ಲ ಸಮುದಾಯಗಳಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಸರ್ಕಾರ ಬದಲಾವಣೆಯಾಗಿದೆ ಎಂದಮಾತ್ರಕ್ಕೆ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸುವ ಪ್ರಯತ್ನ ಮಾಡಲಾಗದು. ಅಲ್ಲದೆ, ಹಿಂದಿನ ಸರ್ಕಾರ ಮಾಡಿದ ನಾಮ ನಿರ್ದೇಶನವನ್ನು ಒಂದು ಆದೇಶದ ಮೂಲಕ ಸಂಪೂರ್ಣವಾಗಿ ರದ್ದುಪಡಿಸುವ ಅಧಿಕಾರ ಹೊಸ ಸರ್ಕಾರಕ್ಕೆ ಇರುವುದಿಲ್ಲ. ಆದರೆ, ಹಿಂದಿನ ಸರ್ಕಾರ ಮಾಡಿರುವ ನಿರ್ಧಾರಗಳು ಕಾನೂನಿಗೆ ವಿರುದ್ಧವಾಗಿವೆ ಎಂದಾದಲ್ಲಿ ಮಾತ್ರವೇ ಬದಲಾವಣೆ ಮಾಡಬಹುದು‘ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಪಿ.ಎನ್‌.ಮನಮೋಹನ್‌ ವಾದ ಮಂಡಿಸಿದ್ದರು.

ಪ್ರಕರಣವೇನು?: ಗೋಕರ್ಣದ ‘ಶ್ರೀ ಮಹಾಬಲೇಶ್ವರ ದೇವಸ್ಥಾನ‘ದ ಡಿ–ನೋಟಿಫೈ ಪ್ರಕರಣದ ಸಿವಿಲ್‌ ದಾವೆಯಲ್ಲಿ ಸುಪ್ರೀಂ ಕೋರ್ಟ್‌ 2021ರ ಏಪ್ರಿಲ್‌ 19ರಂದು ಮಧ್ಯಂತರ ಆದೇಶ ನೀಡಿತ್ತು. ಈ ಆದೇಶದ ಅನುಸಾರ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ 2021ರ ಮೇ 4ರಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಶ್ರೀಕೃಷ್ಣ ನೇತೃತ್ವದಲ್ಲಿ ಅಧ್ಯಕ್ಷರನ್ನೂ ಒಳಗೊಂಡಂತೆ 8 ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಲಾಗಿತ್ತು.

ಏತನ್ಮಧ್ಯೆ, 2023ರ ರಾಜ್ಯ ವಿಧಾನಸಭೆ ಚುನಾವಣೆ ನಂತರ ನೂತನ ರಾಜ್ಯ ಸರ್ಕಾರ ಎಲ್ಲ ನಾಮ ನಿರ್ದೇಶನಗಳನ್ನು 2023ರ ಮೇ 22ರಂದು ರದ್ದುಪಡಿಸಿ ಆದೇಶಿಸಿತ್ತು. ಈ ಆದೇಶದನ್ವಯ ಗೋಕರ್ಣ ದೇವಾಲಯದ ಸಮಿತಿಯಲ್ಲಿದ್ದ ಉಪಾಧಿವಂತರಾದ ಮಹಾಬಲ ಉಪಾಧ್ಯೆ, ದತ್ತಾತ್ರೇಯ ಹಿರೇಗಂಗೆ ಮತ್ತು ವಿದ್ವಾಂಸರಾದ ಪರಮೇಶ್ವರ ಮಾರ್ಕಾಂಡೆ ಹಾಗೂ ಮುರಳೀಧರ ಪ್ರಭು ಅವರನ್ನು ಕೈಬಿಡಲಾಗಿತ್ತು.

ಉಪಾಧಿವಂತರ ಸ್ಥಾನಕ್ಕೆ ಗಣಪತಿ ಶಿವರಾಮ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ವಿದ್ವಾಂಸರ ಸ್ಥಾನಕ್ಕೆ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಹಾಗೂ ಮಹೇಶ್‌ ಗಣೇಶ್‌ ಹಿರೇಗಂಗೆ ಅವರನ್ನು ನಾಮ ನಿರ್ದೇಶನ ಮಾಡಿತ್ತು. ಈ ಕುರಿತಂತೆ ಕಂದಾಯ ಇಲಾಖೆ ಹೊರಡಿಸಿದ್ದ ಆದೇಶವನ್ನು ರಾಮಚಂದ್ರಾಪುರ ಮಠವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT