ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯಕೀಯ ಚಿಕಿತ್ಸಾಲಯ ಪರಭಾರೆಗೆ ಹೈಕೋರ್ಟ್ ತಡೆ

Published 2 ಮೇ 2024, 16:02 IST
Last Updated 2 ಮೇ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆಯ ಚಲವಾದಿ ಪಾಳ್ಯದಲ್ಲಿನ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತ ಇಲಾಖೆಗೆ ಪರಭಾರೆ ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ‘ಚಾಮರಾಜಪೇಟೆ ನಾಗರಿಕರ ಒಕ್ಕೂಟ‘ದ ಅಧ್ಯಕ್ಷ ಶ್ರೀರಾಮೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಜಾಕಾಲದ ವಿಭಾಗೀಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಮತ್ತು ಟಿ.ಜಿ.ಶಿವಶಂಕರೇ ಗೌಡ ಗುರುವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹೈಕೋರ್ಟ್‌ ವಕೀಲ ಶಶಿಧರ ಬೆಳಗುಂಬ, ‘ಮೈಸೂರು ಒಡೆಯರ್‌ ಕಾಲದಲ್ಲಿ ಈಗ್ಗೆ 200 ವರ್ಷಗಳ ಹಿಂದೆ ಚಾಮರಾಜಪೇಟೆಯನ್ನು ಅಭಿವೃದ್ಧಿಪಡಿಸಲಾಯಿತು. ಆಗ 1860ರಲ್ಲಿ ಎಂ.ಮುತ್ತೋಜಿ ರಾವ್ ಶಿಂಧೆ ಎಂಬುವರು ಪಶು ವೈದ್ಯಕೀಯ ಮತ್ತು ಚಿಕಿತ್ಸಾಲಯ ನಿರ್ಮಾಣಕ್ಕಾಗಿ ಈ ಜಾಗವನ್ನು ದಾನವಾಗಿ ನೀಡಿದ್ದರು. ಇಂತಹ ಜಾಗವು ಅನೂಚಾನವಾಗಿ ಪಶು ಸಂಗೋಪನೆ ಇಲಾಖೆಯ ಸುಪರ್ದಿಯಲ್ಲಿದ್ದು, ಈಗ ಇದನ್ನು ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರ ಮಾಡಿರುವ ಸರ್ಕಾರದ ನಿರ್ಧಾರ ದಾನ ನೀಡಿದವರ ಇಚ್ಛೆಗೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.

‘ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಅಧೀನದಲ್ಲಿನ ಗೂಡ್‌ಶೆಡ್‌ ರಸ್ತೆಗೆ ಹೊಂದಿಕೊಂಡಂತಿರುವ ಎರಡು ಎಕರೆ ಜಾಗವನ್ನು ಪರಭಾರೆ ಮಾಡಿ ಸರ್ಕಾರ ಹೊರಡಿಸಿರುವ 2024ರ ಫೆಬ್ರುವರಿ 26ರ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿದರು. 

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT