ಬೆಂಗಳೂರು: ಮಾನವರ ಜೀವಕ್ಕೆ ಎರವಾಗುವ ಉಗ್ರ ಸ್ವರೂಪದವು ಎಂದೇ ಪರಿಗಣಿಸಲಾದ ಅಡ್ಡ ತಳಿಯೂ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ನಾಯಿಗಳ ತಳಿ ಅಭಿವೃದ್ಧಿ ಮತ್ತು ಸಾಕಾಣಿಕೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಅನುಷ್ಠಾನಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ನಗರದ ಶ್ವಾನ ತರಬೇತುದಾರರಾದ ಕಿಂಗ್ ಸಾಲೊಮನ್ ಡೇವಿಡ್ ಮತ್ತು ಮರ್ಡೋನಾ ಜೋನ್ಸ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆರ್.ಸ್ವರೂಪ್ ಆನಂದ್, ‘ನಿಷೇಧದ ನಿರ್ಧಾರಕ್ಕೆ ಸಂಬಂಧಿಸಿದಂತೆ ನಾಯಿ ತಳಿಗಳ ಅಭಿವೃದ್ಧಿಯಲ್ಲಿ ಹೆಸರು ಮಾಡಿರುವ ಕೆನ್ನೆಲ್ ಕ್ಲಬ್ ಆಫ್ ಇಂಡಿಯಾ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹ ಮಾಡಿಲ್ಲ’ ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ಸುತ್ತೋಲೆಗೆ ತಡೆ ನೀಡಿದೆ. ಅಂತೆಯೇ, ‘ಈ ಆದೇಶವು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವೇ ಅನ್ವಯಿಸುತ್ತದೆ’ ಎಂದು ಸ್ಪಷ್ಟಪಡಿಸಿದೆ.
‘ಯಾವ ಅಂಶಗಳ ಆಧಾರದಲ್ಲಿ ಈ ಎಲ್ಲಾ ತಳಿಗಳ ನಾಯಿ ಸಾಕಾಣಿಕೆ ಮತ್ತು ಅಭಿವೃದ್ಧಿ ನಿಷೇಧಿಸಲಾಗಿದೆ ಎಂಬ ಬಗ್ಗೆ ಅವಲೋಕನ ನಡೆಸಿದ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಪ್ರಕರಣವೇನು?: ದೆಹಲಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಅಲ್ಲಿನ ನ್ಯಾಯಪೀಠವು, ‘ಅರ್ಜಿದಾರರ ಮನವಿಯನ್ನು ಮೂರು ತಿಂಗಳ ಒಳಗಾಗಿ ಪರಿಗಣಿಸಬೇಕು. ಈ ವಿಷಯದಲ್ಲಿ ಸಂಬಂಧಿಸಿದ ಪಾಲುದಾರರ ಜೊತೆ ತಜ್ಞರು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು’ ಎಂದು ಆದೇಶಿಸಿತ್ತು. ಇದರನ್ವಯ ಕೇಂದ್ರ ಪಶು ಸಂಗೋಪನೆ ಮತ್ತು ಡೈರಿ ಸಚಿವಾಲಯ 20ಕ್ಕೂ ಹೆಚ್ಚು ಬಗೆ ತಳಿಗಳ ನಾಯಿ ಸಾಕಾಣಿಕೆ ಮತ್ತು ಅಭಿವೃದ್ಧಿಯನ್ನು ನಿಷೇಧಿಸಿ ಇದೇ 12ರಂದು ಸುತ್ತೋಲೆ ಹೊರಡಿಸಿತ್ತು.
‘ಈ ಸುತ್ತೋಲೆ ಅಸಾಂವಿಧಾನಿಕವಾಗಿದೆ’ ಎಂದು ಆಕ್ಷೇಪಿಸಿರುವ ಅರ್ಜಿದಾರರು, ‘ಅಪಾಯಕಾರಿ ಎಂಬ ಅಭಿಪ್ರಾಯಕ್ಕೆ ಬರುವ ಮುನ್ನ ಅಂತಹ ತಳಿಯ ಶ್ವಾನಗಳ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ. ಈ ವಿಷಯದಲ್ಲಿ ನಾವೂ ಪಾಲುದಾರರಿದ್ದೇವೆ ಮತ್ತು ಈ ದಿಸೆಯಲ್ಲಿ ಭಾರತದಾದ್ಯಂತ ಸುಪರಿಚಿತವಾದ ನಾಯಿಗಳ ತಳಿ ಅಭಿವೃದ್ಧಿಯ ಕೆನ್ನೆಲ್ ಕ್ಲಬ್ ಆಫ್ ಇಂಡಿಯಾದ ಜೊತೆ ತಜ್ಞರು ಯಾವ ಚರ್ಚೆಯನ್ನೂ ನಡೆಸಿಲ್ಲ. ಹಾಗಾಗಿ, ಸುತ್ತೋಲೆಯನ್ನು ರದ್ದುಗೊಳಿಸಬೇಕು. ಅರ್ಜಿ ಇತ್ಯರ್ಥವಾಗುವ ತನಕ ಸುತ್ತೋಲೆಯ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಬೇಕು‘ ಎಂದು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.