ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World AIDS Day | ರಾಜ್ಯದಲ್ಲಿ ಎಚ್‌ಐವಿ ಸೋಂಕು ‍ಪ್ರಮಾಣ ಇಳಿಕೆ

ಶೂನ್ಯಗೊಳಿಸಲು ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಮಂಡಳಿ ಗುರಿ
Published 30 ನವೆಂಬರ್ 2023, 19:17 IST
Last Updated 30 ನವೆಂಬರ್ 2023, 19:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಎಚ್‌ಐವಿ ಸೋಂಕು ಪ್ರಕರಣಗಳ ಪ್ರಮಾಣ ಕಡಿಮೆ ಆಗಿದೆ. ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ವರ್ಗವಾಗುವ ಪ್ರಮಾಣ ಶೇ 0.02ಕ್ಕೆ ಇಳಿದಿದೆ. 2025ರ ವೇಳೆಗೆ ಇದನ್ನು ಶೂನ್ಯಕ್ಕೆ ತರುವ ಗುರಿ ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಮಂಡಳಿ (ಕೆಎಸ್‌ಎಪಿಎಸ್) ಹೊಂದಿದೆ.

ಎಚ್‌ಐವಿ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿರುವ ಮಂಡಳಿಯು ಮುಂದಿನ ಹತ್ತು ವರ್ಷಗಳಲ್ಲಿ ಏಡ್ಸ್ ಮುಕ್ತ ರಾಜ್ಯ ಆಗಿಸಲು ಪಣತೊಟ್ಟಿದೆ. ಇದಕ್ಕೆ ಪೂರಕವಾಗಿ ಜಾಗೃತಿ ಕಾರ್ಯಗಳು ನಡೆದಿವೆ.

‘ಎಚ್‌ಐವಿ/ಏಡ್ಸ್ ಹೊಸ ಪ್ರಕರಣ ಗಳನ್ನು ನಿಯಂತ್ರಿಸಿದರೆ, ಮುಂದಿನ ವರ್ಷಗಳಲ್ಲಿ ನಾವು ಗುರಿ ಸಾಧಿಸಬಹುದು. ಆ ದಿಸೆಯಲ್ಲಿ ರಾಜ್ಯದಲ್ಲಿ ವ್ಯವಸ್ಥಿತ ರೀತಿಯಲ್ಲಿ ಯೋಜನೆ ಸಿದ್ಧಪಡಿಸುವುದರ ಜೊತೆಗೆ ಅಷ್ಟೇ ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಿದ್ದೇವೆ’ ಎಂದು ಮಂಡಳಿಯ ಹೆಚ್ಚುವರಿ ಯೋಜನಾ ನಿರ್ದೇಶಕ ಡಾ.ರಮೇಶ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು, ಸಂಯೋಜಿತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ (ಐಸಿಟಿಸಿ) ಸಿಬ್ಬಂದಿ ಮತ್ತು ಆಪ್ತಸಮಾಲೋಚಕರ ಶ್ರಮದಿಂದ ಎಚ್‌ಐವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ’ ಎಂದು ಅವರು ವಿವರಿಸಿದರು.

1999ರಲ್ಲಿ ಆರಂಭವಾದ ಐಸಿಟಿಸಿ ಕೇಂದ್ರಗಳು ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜು ಮತ್ತು 33 ಜಿಲ್ಲಾ ಆಸ್ಪತ್ರೆಗಳಲ್ಲಿ ಇವೆ. ಸೋಂಕಿತರಿಗೆ ಪ್ರತಿ ದಿನ ಸಮಾಲೋಚನೆ ಮಾಡುವುದರ ಜೊತೆ ಔಷಧಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

‘ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ವರ್ಗಾವಣೆಯಾಗದಂತೆ ತಡೆಯಲು ಪ್ರಮುಖ ಪಾತ್ರ ವಹಿಸುವ ನೆವರಿಪೈನ್‌ ಸೇರಿ ಕೆಲ ಔಷಧಿಗಳನ್ನು ನೀಡುತ್ತೇವೆ.  ಶಿಶು ಜನಿಸಿದ ಬಳಿಕ ಅದರ ತೂಕದ ಅನುಸಾರ ಔಷಧಿ ನೀಡಿ, ನಿಗಾ ವಹಿಸುತ್ತೇವೆ. ನಂತರ ಹಂತಹಂತವಾಗಿ ಪರೀಕ್ಷೆಯನ್ನೂ ಮಾಡುತ್ತೇವೆ‌‌’ ಎಂದು ಕಿಮ್ಸ್‌ನ ಐಸಿಟಿಸಿ ಕೇಂದ್ರದ ಆಪ್ತಸಮಾಲೋಚಕಿ ಸವಿತಾ ಅಂಗಡಿ ಹೇಳಿದರು.

ರಾಜ್ಯದ ಐಸಿಟಿಸಿ ಕೇಂದ್ರಗಳಲ್ಲಿ ಎಚ್‌ಐವಿ ಸೋಂಕು ಪೀಡಿತರಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಔಷಧಿ ಕೊಡಲಾಗುತ್ತಿದೆ. ಯಾವುದೇ ಗೊಂದಲ, ಸಮಸ್ಯೆಗಳಿಗೆ ಆಸ್ಪದ ಮಾಡಿಕೊಡುತ್ತಿಲ್ಲ.
-ಡಾ.ರಮೇಶ ರೆಡ್ಡಿ, ಹೆಚ್ಚುವರಿ ಯೋಜನಾ ನಿರ್ದೇಶಕ, ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT