ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌.ಎಂ.ಟಿ ಕಾರ್ಖಾನೆಗೆ ಜೀವ ತುಂಬುವೆ: ಎಚ್‌.ಡಿ. ಕುಮಾರಸ್ವಾಮಿ

ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ’ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
Published 5 ಜುಲೈ 2024, 15:15 IST
Last Updated 5 ಜುಲೈ 2024, 15:15 IST
ಅಕ್ಷರ ಗಾತ್ರ

ಮಂಡ್ಯ: ‘ಎಚ್‌.ಎಂ.ಟಿ. ಕಾರ್ಖಾನೆ, ಭದ್ರಾವತಿಯ ವಿ.ಐ.ಎಸ್‌.ಎಲ್‌. ಕಾರ್ಖಾನೆ ಮತ್ತು ಆಂಧ್ರಪ್ರದೇಶದ ವೈಜಾಗ್‌ನ ಆರ್‌.ಐ.ಎನ್‌.ಎಲ್‌. ಸ್ಟೀಲ್‌ ಪ್ಲಾಂಟ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ’ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. 

ನಗರದಲ್ಲಿ ಶುಕ್ರವಾರ ಜನತಾದರ್ಶನ ಕಾರ್ಯಕ್ರಮ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಆರು ರಾಜ್ಯಗಳಲ್ಲಿರುವ ಎಚ್‌.ಎಂ.ಟಿ. ಕಾರ್ಖಾನೆಯ ಶಾಖೆಗಳಿಗೆ ಭೇಟಿ ಕೊಟ್ಟು ಯಾವ ರೀತಿಯ ಪುನಃಶ್ಚೇತನ ಮಾಡಬೇಕು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ದೆಹಲಿಯ ಉದ್ಯೋಗ ಭವನದಲ್ಲಿ ನಿತ್ಯ ಸರ್ಕಾರಿ ಕೈಗಾರಿಕೆಗಳ ಪುನಃಶ್ಚೇತನದ ಬಗ್ಗೆ ಸಭೆ ನಡೆಸುತ್ತಿದ್ದೇನೆ ಎಂದರು. 

1918ರಿಂದ ಪ್ರಾರಂಭವಾಗಿರುವ ಅನೇಕ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಇವುಗಳಿಗೆ ಶಕ್ತಿ ತುಂಬಿ, ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತೇನೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ನನಗೆ ಇನ್ನೂ 3 ತಿಂಗಳು ಕಾಲಾವಕಾಶ ಬೇಕು ಎಂದು ತಿಳಿಸಿದರು. 

ಭೂಮಿ ನುಂಗಿದವರು ಯಾರು?

1974ರಲ್ಲಿ ಎಚ್‌.ಎಂ.ಟಿ. ಕಾರ್ಖಾನೆ ಪ್ರಾರಂಭವಾದಾಗ 8 ಸಾವಿರ ಮಂದಿ ಉದ್ಯೋಗ ಮಾಡುತ್ತಿದ್ದರು. ಅಲ್ಲಿ ₹280 ಕೋಟಿ ಆದಾಯ ಬರುತ್ತಿತ್ತು. 350 ಎಂಜಿನಿಯರುಗಳು ಹೊಸದಾಗಿ ಆರಂಭವಾದ ಖಾಸಗಿ ಕಾರ್ಖಾನೆಗೆ ವಲಸೆ ಹೋದರು. ಅಲ್ಲಿಗೆ ಎಚ್‌.ಎಂ.ಟಿ. ಕತೆ ಮುಗಿಯಿತು. ಎಚ್‌ಎಂಟಿ ಭೂಮಿ ಯಾರ‍್ಯಾರು ಕಬಳಿಸಿದ್ದಾರೆ ಎಂಬುದನ್ನು ರಾಜ್ಯ ಸರ್ಕಾರ ತನಿಖೆ ಮಾಡಲು ಸಿದ್ಧವಿದೆಯೇ? ಎಂದು ಸವಾಲು ಹಾಕಿದರು. 

ಪ್ರೋಟೊಕಾಲ್‌ ನಂಬಿ ರಾಜಕಾರಣ ಮಾಡಲ್ಲ:

ಜನತಾ ದರ್ಶನಕ್ಕೆ ಬಂದ ಸಾವಿರಾರು ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಕೊರತೆ ಕಾಡಿತು. ಅಧಿಕಾರಿಗಳು ಹೋಗದಂತೆ ರಾಜ್ಯ ಸರ್ಕಾರವೇ ಸುತ್ತೋಲೆ ಹೊರಡಿಸಿತು. ರಾಜ್ಯ ಸರ್ಕಾರದ ಪ್ರೊಟೋಕಾಲ್‌ ನಂಬಿ ನಾನು ರಾಜಕಾರಣ ಮಾಡುತ್ತಿಲ್ಲ. ನನ್ನನ್ನು ನಿಮ್ಮ ಜಿಲ್ಲೆಗೆ (ರಾಮನಗರ) ಬಂದಾಗ ಯಾವ ರೀತಿ ನಡೆಸಿಕೊಂಡಿದ್ದೀರಿ ಎಂಬುದು ಗೊತ್ತಿದೆ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರ್ಜಿ ಹಿಡಿದುಕೊಂಡು ಬಂದಿರಲಿಲ್ಲವೇ?

ಕರ್ನಾಟಕ ರಾಜ್ಯ ಸರ್ಕಾರದ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಮುಖ್ಯಮಂತ್ರಿ ಮತ್ತು ಸಚಿವರ ದಂಡು ಮೊನ್ನೆ ದೆಹಲಿಗೆ ಬಂದಿತ್ತು. ಆಗ ಯಾರ ಮುಂದೆ ಅರ್ಜಿ ಹಿಡಿದುಕೊಂಡು ಬಂದಿದ್ದರು? ನಮ್ಮ ಹತ್ತಿರ ಬಂದಿರಲಿಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಎರಡೂ ಸರ್ಕಾರಗಳಿಗೂ ಜವಾಬ್ದಾರಿ ಇದೆ. ಇದನ್ನು ಅರ್ಥಮಾಡಿಕೊಳ್ಳಲಿ. ಕೇಂದ್ರ ಸಚಿವರಿಗೆ ಯಾವ ರೀತಿ ಭದ್ರತೆ ಕೊಡಬೇಕು ಎಂಬುದು ಈ ರಾಜ್ಯ ಸರ್ಕಾರಕ್ಕೆ ಜ್ಞಾನ ಇದೆಯಾ?  ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT