ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನ್‌ಸ್ಟೆಬಲ್‌ಗಳ ಅಂತರ ಜಿಲ್ಲಾ ವರ್ಗಾವಣೆ‌ ಶೀಘ್ರ: ಜಿ. ಪರಮೇಶ್ವರ

Published 9 ಜೂನ್ 2024, 15:29 IST
Last Updated 9 ಜೂನ್ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಶೀಘ್ರ ಚಾಲನೆ ನೀಡಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಭಾನುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಎರಡು ತಿಂಗಳು ಯಾವುದೇ ಕೆಲಸ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿಲ್ಲ’ ಎಂದರು.

‘ಅಂತರ ಜಿಲ್ಲಾ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಕಳೆದಿದ್ದರೂ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ವರ್ಗಾವಣೆ ಭಾಗ್ಯ ದೊರೆತಿಲ್ಲ’ ಎಂದು ಭಾನುವಾರದ (ಜೂನ್‌ 9) ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

ಒಳ ಜಗಳ ಆಗಿಲ್ಲ: ‘ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಪರಿಗಣಿಸುತ್ತಿಲ್ಲ’ ಎಂಬ ಆರೋಪದ ಕುರಿತ ಪ್ರಶ್ನೆಗೆ ಅವರು, ‘ಆ ರೀತಿ ಇಲ್ಲ. ಸಂದರ್ಭ ಅನುಸಾರ ಅಂತಹ ಮಾತುಗಳನ್ನು ಹೇಳಿರುತ್ತೇವೆ. ನಮ್ಮಲ್ಲಿ ಒಳ ಜಗಳ ಆಗಿಲ್ಲ’ ಎಂದರು.

‘ಪಕ್ಷದಲ್ಲಿನ ಒಳ ಜಗಳವನ್ನು ತುಮಕೂರಿನ ಶಾಸಕ ಸುರೇಶ್‌ಗೌಡ ಅವರು ಎಲ್ಲಿ ನೋಡಿದ್ದಾರೊ, ಎಲ್ಲಿ ಆಗಿದೆಯೊ ಅವರಿಗೇ ಗೊತ್ತು. ವಿಚಾರಗಳು ಬಂದಾಗ ಒಬ್ಬೊಬ್ಬರು ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಸಹಜ. ಅಂತಹ ಸಂದರ್ಭದಲ್ಲಿ ಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಹಂಚಿಕೊಳ್ಳಲು ಸಚಿವ ಸಂಪುಟ ಇದೆ. ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಕೋರ್‌ ಕಮಿಟಿ ಕೈಗೊಳ್ಳಬಹುದು. ಅದಕ್ಕೆ ಪಕ್ಷದ ಅಧ್ಯಕ್ಷರು ಅವಕಾಶ ಕೊಡಬೇಕಾಗಿದೆ. ಸಂದರ್ಭ ಬಂದಾಗ ಅವರು ಮಾಡುತ್ತಾರೆ’ ಎಂದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಎಸ್ಐಟಿಗೆ ಸೂಚಿಸಿದ್ದೇವೆ. ತನಿಖೆ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಾಯ ಮಾಡಲು ಆಗುವುದಿಲ್ಲ. ಸಿಬಿಐನವರು ಅಧಿಕೃತವಾಗಿ ಯಾವುದೇ ಪತ್ರ ಬರೆದಿಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT