ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕನ್ನಡ ವಿಶ್ವಕೋಶ’ ಪರಿಷ್ಕರಣೆ ಪೂರ್ಣ: ಜೂನ್‌ ವೇಳೆಗೆ ಪರಿಷ್ಕೃತ ಸಂಪುಟಗಳು ಲಭ್ಯ

ಹೊಸ ವಿಷಯ ವಿಶ್ವಕೋಶಗಳ ರಚನಾ ಕಾರ್ಯವೂ ಆರಂಭ
Published 2 ಮೇ 2024, 1:06 IST
Last Updated 2 ಮೇ 2024, 1:06 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಹೊರತರುತ್ತಿರುವ ‘ಕನ್ನಡ ವಿಶ್ವಕೋಶ’ದ ಎಲ್ಲ ಸಂಪುಟಗಳು ಪರಿಷ್ಕರಣ ಕಾರ್ಯ ಮುಗಿಯುವ ಹಂತಕ್ಕೆ ಜೂನ್‌ ವೇಳೆಗೆ ಮರು ಬಿಡುಗಡೆಯಾಗಲಿವೆ.

ವಿಶ್ವಕೋಶವು 14 ಸಂಪುಟಗಳನ್ನು ಹೊಂದಿದ್ದು, ಪರಿಷ್ಕರಣೆ ಆಗಿರಲಿಲ್ಲ. 2014ರವರೆಗೆ ಸಂಪುಟ 7ರವರೆಗೆ ಪರಿಷ್ಕರಣೆ ನಡೆದಿತ್ತು. 10 ಹಾಗೂ 13ನೇ ಸಂಪುಟಗಳ ಕಾರ್ಯ ಇದೀಗ ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿವೆ. 11, 12, 14ನೇ ಸಂಪುಟಗಳು ಕೆಲಸ ಭರದಿಂದ ಸಾಗಿದೆ.

‘ಬ್ರಿಟಾನಿಕಾ ಎನ್ಸೈಕ್ಲೊಪಿಡಿಯಾ’ ಮಾದರಿಯಲ್ಲಿ 1968ರಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ವಿಶ್ವಕೋಶಗಳನ್ನು ಹೊರತರಲಾಗುತ್ತಿದೆ. 14 ಸಾಮಾನ್ಯ ವಿಶ್ವಕೋಶಗಳ ರಚನೆಯು 2004ರಲ್ಲಿ ಪೂರ್ಣಗೊಂಡಿತ್ತು. ಇದೀಗ ಬಹುತೇಕ ಎಲ್ಲ ಸಂಪುಟಗಳ ಪರಿಷ್ಕರಣೆ ನಡೆದಿದೆ’ ಎಂದು ಕುವೆಂ‍ಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ವಿಜಯಕುಮಾರಿ ಎಸ್‌. ಕರಿಕಲ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘12 ಸಂಪುಟಗಳು ಖಾಲಿಯಾಗಿದ್ದವು. ಇವುಗಳೊಂದಿಗೆ ಕರ್ನಾಟಕ ವಿಶ್ವಕೋಶಗಳ 2 ಸಂ‍ಪುಟ, ಜಾನಪದ, ಪ್ರಾಣಿವಿಜ್ಞಾನ, ಭೂಗೋಳವಿಜ್ಞಾನ, ಇತಿಹಾಸ ಮತ್ತು ಪುರಾತತ್ವ ವಿಷಯ ವಿಶ್ವಕೋಶಗಳ ಪರಿಷ್ಕರಣೆ ಹಾಗೂ ಪುನರ್‌ ಮುದ್ರಣ ಕಾರ್ಯ ನಡೆಯುತ್ತಿದೆ’ ಎಂದರು.

‘ವೈದ್ಯವಿಜ್ಞಾನ, ಮಾನವ ವಿಜ್ಞಾನ, ಪತ್ರಿಕೋದ್ಯಮ ವಿಷಯಗಳ ಕುರಿತ ಹೊಸ ವಿಶ್ವಕೋಶಗಳ ರಚನಾ ಕಾರ್ಯವೂ ಪ್ರಗತಿಯಲ್ಲಿದೆ’ ಎಂದೂ ತಿಳಿಸಿದರು.

‘ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೋಶಗಳನ್ನು ರಚಿಸಲಾಗಿದೆ. ‘ಅ’ಕಾರಾದಿಯಾಗಿ ಎಲ್ಲ ವಿಷಯಗಳ ಮಾಹಿತಿ ಇರಲಿದ್ದು, ವಿಷಯ ತಜ್ಞರ ಗೌರವ ಸಂಪಾದನೆಯಡಿ ರಚಿತಗೊಂಡಿವೆ. ಅವರಿಗೆ ಗೌರವ ಸಂಭಾವನೆ ನೀಡಲಾಗುತ್ತದೆ’ ಎಂದರು.

‘ಸಾವಿರ ಪುಟಗಳ ವಿಶ್ವಕೋಶಗಳ ಬೆಲೆಯು ಪ್ರತಿ ಸಂಪುಟಕ್ಕೆ ₹ 550ರಿಂದ ₹ 650ರವರೆಗೆ ಇದೆ. ವಿಷಯ  ವಿಶ್ವಕೋಶಗಳ ಬೆಲೆಯು ₹ 300ರಿಂದ ₹500ರವರೆಗೆ ಇದೆ. ಕರ್ನಾಟಕ ವಿಶ್ವಕೋಶದ ಇಂಗ್ಲಿಷ್‌ ಆವೃತ್ತಿಯು 2016ರಲ್ಲಿ ಪ್ರಕಟಗೊಂಡಿದ್ದು, ಇದರ ಬೆಲೆ ₹ 1 ಸಾವಿರ’ ಎಂದು ತಿಳಿಸಿದರು. 

‘ಮೊದಲು ಸರ್ಕಾರಿ ಮುದ್ರಾಣಾಲಯದಲ್ಲಿ ಮುದ್ರಿತವಾಗುತ್ತಿತ್ತು. 2004ರಿಂದ ಇ–ಟೆಂಡರ್‌ ಮೂಲಕ ಮುದ್ರಣಕ್ಕೆ ಖಾಸಗಿಯವರಿಗೆ ನೀಡಲಾಗುತ್ತಿದೆ’ ಎಂದರು. 

ಪ್ರೊ.ವಿಜಯಕುಮಾರಿ ಎಸ್. ಕರಿಕಲ್
ಪ್ರೊ.ವಿಜಯಕುಮಾರಿ ಎಸ್. ಕರಿಕಲ್

‘ರಚನೆಗೆ ದಶಕದ ಶ್ರಮ’

‘ವಿಶ್ವಕೋಶಗಳ ಪರಿಷ್ಕರಣೆ ಸುಲಭದ ಕಾರ್ಯವಲ್ಲ. ಸಮಯ ಹೆಚ್ಚು ಬೇಕು. ಒಂದೊಂದು ಪುಸ್ತಕ ರೂಪಿಸಲು ದಶಕದ ಶ್ರಮವಿದೆ. ಹೊಸ ವಿಷಯಗಳನ್ನು ಸೇರಿಸಲಾಗುತ್ತದೆ. ಚಂದ್ರಯಾನ ಮಂಗಳಯಾನದಂಥ ವಿಷಯಗಳೂ ಪುಸ್ತಕದಲ್ಲಿವೆ’ ಎಂದು ವಿಜಯಕುಮಾರಿ ಕರಿಕಲ್ ಹೇಳಿದರು. ‘ಆನ್‌ಲೈನ್‌ನಲ್ಲಿ ಎಲ್ಲ ವಿಷಯಗಳ ಮಾಹಿತಿ ಸಿಕ್ಕಿದರೂ ವಿಶ್ವಕೋಶದಂತೆ ಸಮಗ್ರವಾಗಿ ದೊರೆಯದು. ಹಿಡಿ–ಹಿಡಿಯಾಗಿ ವಿಷಯ ಗ್ರಹಿಸಲು ಈ ಗ್ರಂಥಗಳನ್ನು ಓದುವುದೇ ಮುಖ್ಯ’ ಎಂದರು.  ‘ಜೂನ್‌ ಒಳಗೆ ಪರಿಷ್ಕೃತ ಪ್ರತಿಗಳ ಬಿಡುಗಡೆ ನಡೆಯಲಿದೆ. ರಿಯಾಯಿತಿ ದರದಲ್ಲಿ ಮಾರಲಾಗುತ್ತದೆ. ಬಂದ ಹಣವನ್ನು ಪರಿಷ್ಕರಣೆ ಮತ್ತು ಮುದ್ರಣಕ್ಕೆ ಬಳಸಲಾಗುತ್ತದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT