ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ಸಾವು, ಶಾಸಕ ಸೇರಿ ನಾಲ್ವರಿಗೆ ಗಾಯ

ಕಾರ ಹುಣ್ಣಿಮೆ ಸಂದರ್ಭ ಅವಘಡ
Last Updated 28 ಜೂನ್ 2018, 19:54 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ವಿವಿಧೆಡೆ ಗುರುವಾರ ಕಾರ ಹುಣ್ಣಿಮೆ ಆಚರಣೆ ಸಂಬಂಧ ಏರ್ಪಡಿಸಿದ್ದ ಎತ್ತಿನಬಂಡಿ ಓಡಿಸುವ ಸ್ಪರ್ಧೆಯಲ್ಲಿಒಬ್ಬರು ಮೃತಪಟ್ಟಿದ್ದು, ನಾಲ್ವರು ತೀವ್ರ ಗಾಯಗೊಂಡಿದ್ದಾರೆ. ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ ಅವರ ಕಾಲ ಮೇಲೂ ಬಂಡಿ ಹರಿದಿದ್ದು ಅಪಾಯದಿಂದ ಪಾರಾಗಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಪೊಲೀಸ್‌ ಠಾಣೆಯ ವ್ಯಾಪ್ತಿಯ ಗಂಜಗಿರಿ ತಾಂಡಾದಲ್ಲಿ ಓಡುವ ಬಂಡಿಯಿಂದ ಬಿದ್ದು ರಾಜು ಶಿವರಾಮ ಚವ್ಹಾಣ (35) ಸ್ಥಳದಲ್ಲೇ ಮೃತಟ್ಟಿದ್ದಾರೆ.

ಎತ್ತುಗಳು ಓಡುವಾಗ ಬಂಡಿಯ ಗಾಲಿ ದೊಡ್ಡ ಕಲ್ಲಿಗೆತಾಗಿತು. ಕೆಳಕ್ಕೆ ಬಿದ್ದ ರಾಜು ಅವರ ಮೇಲೆಯೇ ಗಾಲಿಗಳು ಹರಿದು ಮೃತಪಟ್ಟರು.

ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಶರಣಕುಮಾರಮತ್ತು ಆನಂದ ಎಂಬುವವರು ತೀವ್ರ ಗಾಯಗೊಂಡಿದ್ದಾರೆ. ಬಂಡಿ ಓಡುವ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ಶರಣಕುಮಾರ ಅವರ ಮುಖವನ್ನು ಎತ್ತುಗಳು ತುಳಿದವು. ಓಟ ನೋಡಲು ಪಕ್ಕದಲ್ಲಿ ನಿಂತಿದ್ದ ಆನಂದ ಅವರನ್ನು ಕೊಂಬಿನಿಂದ ತಿವಿದು ಗಾಯಗೊಳಿಸಿವೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಸಕರ ಕಾಲ ಮೇಲೆ ಹರಿದ ಬಂಡಿ:

ಚಿಂಚೋಳಿ ವರದಿ: ಪಟ್ಟಣದ ಹಿರೇಅಗಸಿಯಲ್ಲಿ ಗುರುವಾರ ಕಾರ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಡಾ.ಉಮೇಶ ಜಾಧವ್‌ ಅವರ ಕಾಲ ಮೇಲೆ ಬಂಡಿ ಹರಿದು ಗಾಯಗೊಂಡಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಬಂಡಿಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಓಡಲು ಸಿದ್ಧವಾಗಿದ್ದ ಎತ್ತುಗಳು ಏಕಾಏಕಿ ಶಾಸಕರು ಇದ್ದ ಕಡೆ ನುಗ್ಗಿದವು. ಈ ಸಂದರ್ಭ ಹತ್ತಿರದಲ್ಲಿ ಇದ್ದವರು ಅವರನ್ನು ಎಳೆದುಕೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಬಂಡಿ ಓಟಕ್ಕೆ ಚಾಲನೆ ನೀಡಿದ ನಂತರ ಶಾಸಕರು ಹುಣಸೆಮರದಡಿ ನಿಂತಿದ್ದರು. ಹೆಗಲುಗೊಟ್ಟು ನಿಂತಿದ್ದ ಎತ್ತುಗಳತ್ತ ವ್ಯಕ್ತಿಯೊಬ್ಬರು ಬಾರಕೋಲು ಬೀಸಿದರು. ಬೆದರಿದ ಎತ್ತುಗಳು ಛಂಗಣೆ ನೆಗೆದು ಶಾಸಕರು ಇದ್ದ ಕಡೆಯೇ ಬಂದವು. ಇದನ್ನು ಗಮನಿಸಿದ ಐನೋಳ್ಳಿ ಅಲ್ಲಾವುದ್ದಿನ್‌ ಅನ್ಸಾರಿ ಎಂಬುವವರು ಶಾಸಕರನ್ನು ರಕ್ಷಿಸಲು ತಮ್ಮತ್ತ ಎಳೆದುಕೊಂಡರು. ಆಗ ಬಂಡಿ ಅವರ ಬಲಗಾಲಿನ ಮೇಲೆ ಹರಿಯಿತು. ಶಾಸಕರ ಕಾಲು, ಬೆನ್ನು ಹಾಗೂ ಭುಜಕ್ಕೆ ಪೆಟ್ಟಾಯಿತು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಲಾಯಿತು.

ಅವರ ಬಳಿಯೇ ಇದ್ದ ಮುಖಂಡರಾದ ಕೆ.ಎಂ. ಬಾರಿ ಮತ್ತು ಡಾ.ರಫಿಕ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ವಿಧಾನ ಸಭೆ ಚುನಾವಣೆಯ ಪೂರ್ವದಲ್ಲಿಯೂ ಡಾ.ಉಮೇಶ ಜಾಧವ್‌ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT