ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಮಕ್ಕಳೊಂದಿಗೆ CM ಸಿದ್ದರಾಮಯ್ಯ ಸಂವಾದ

Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಜ್ಞಾನದ ವಿಕಾಸ ಆಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ'ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಮ್ಮ ಗೃಹ ಕಚೇರಿಗೆ ಬಂದ, ತಾವು ಓದಿದ ಸಿದ್ದರಾಮನಹುಂಡಿ ಮತ್ತು ಕುಪ್ಪೆಗಾಲ ಸರ್ಕಾರಿ ಶಾಲೆಯ ಮಕ್ಕಳ ಜೊತೆ ಮುಖ್ಯಮಂತ್ರಿ ಸಂವಾದ ನಡೆಸಿದರು.

‘ಸಂವಿಧಾನವನ್ನು ಅರಿತುಕೊಳ್ಳಬೇಕು’ ಎಂದ ಮುಖ್ಯಮಂತ್ರಿ, ‘ಸಂವಿಧಾನ ಏನು ಹೇಳುತ್ತದೆ? ಹೇಳಿ ನೋಡೋಣ’ ಎಂದು ಮಕ್ಕಳನ್ನು ಪ್ರಶ್ನಿಸಿದರು. ಆಗ ಮಕ್ಕಳು ಸಂವಿಧಾನದ ಪೂರ್ಣ ಪೀಠಿಕೆ ಹೇಳಿದರು.

'ಕೇವಲ ಕಂಠಪಾಠ ಮಾಡಿದರೆ ಸಾಲದು. ಅದರ ತಿರುಳು ಅರಿತು ಅದರಂತೆ ನಡೆಯಬೇಕು’ ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದರು.

‘ನಾನು ಓದುವಾಗ ಸಂವಿಧಾನ ಜಾರಿಗೆ ಬಂದಿತ್ತು. ನಾನು ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ನಂಜೇಗೌಡ ಎಂಬುವರು ನನಗೆ ಅಕ್ಷರಾಭ್ಯಾಸ ಮಾಡಿಸಿದರು. ಕನ್ನಡ ಓದು, ಬರೆಯುವುದು, ಲೆಕ್ಕ ವಿಷಯ ಹೇಳಿಕೊಟ್ಟಿದ್ದರು. ಅವರು ಶಾಲೆ ಬಿಟ್ಟ ನಂತರ ಎಮ್ಮೆ ಮೇಯಿಸುತ್ತಿದ್ದ ನನ್ನನ್ನು ರಾಜಪ್ಪ ಎಂಬ ಮೇಷ್ಟ್ರು ನೇರವಾಗಿ 5ನೇ ತರಗತಿಗೆ ಸೇರಿಸಿದ್ದರು. 8ನೇ ತರಗತಿ ಓದಲು ಕುಪ್ಪೆಗಾಲಕ್ಕೆ ಹೋಗುತ್ತಿದ್ದೆ. ಪ್ರೌಢ ಶಾಲೆಗೆ ವಿದ್ಯಾವರ್ಧಕ ಶಾಲೆಗೆ ಸೇರಿದ್ದೆ. ಈಗ ನಿಮಗಿರುವ ಸೌಲಭ್ಯ ಆಗ ನಮಗಿರಲಿಲ್ಲ’ ಎಂದು ನೆನಪಿಸಿಕೊಂಡರು.

‘ಶಾಲೆಯ ದಾಖಲೆಗಳಲ್ಲಿ ನನ್ನ ಹುಟ್ಟಿದ ದಿನಾಂಕ 3-8-‌1947 ಎಂದು ನಮೂದಾಗಿದೆ. ಈಗ ಸರ್ಕಾರ ಹಾಲು, ಮೊಟ್ಟೆ, ಚಿಕ್ಕಿ, ಬಿಸಿಯೂಟ, ಸಮವಸ್ತ್ರ ನೀಡುತ್ತದೆ. ನಮ್ಮ ಕಾಲದಲ್ಲಿ ಶಿಕ್ಷಕರಿಂದ ಏಟನ್ನೂ ತಿನ್ನುತ್ತಿದ್ದೆವು. ಅಂದಿನ ಹೆಣ್ಣು ಮಕ್ಕಳು ಹೆಚ್ಚು ಓದುತ್ತಿರಲಿಲ್ಲ. ಈಶ್ವರಾಚಾರ್ ಹೇಳಿಕೊಟ್ಟಿದ್ದ ಕನ್ನಡ ವ್ಯಾಕರಣವನ್ನು ನಾನು ಈಗಲೂ ಮರೆತಿಲ್ಲ’ ಎಂದರು.

₹ 10 ಲಕ್ಷ ದೇಣಿಗೆ: ತಾವು ಓದಿದ ಕುಪ್ಪೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು  ಸಿದ್ದರಾಮನಹುಂಡಿಯ ಕೆಪಿಎಸ್‌ ಶಾಲೆಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ₹ 10 ಲಕ್ಷ ದೇಣಿಗೆ ನೀಡಿದರು.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ‘ಶಾಲೆಯ ಹಳೆ ವಿದ್ಯಾರ್ಥಿಗಳು ₹ 6 ಕೋಟಿ ನೀಡಿದ್ದಾರೆ. ಮಾಲೂರಿನಲ್ಲಿಯೂ ಹಳೆ ವಿದ್ಯಾರ್ಥಿಗಳು ₹ 6 ಕೋಟಿ ಸಂಗ್ರಹಿಸಿದ್ದಾರೆ. ಸಾಮಾಜಿಕ ಕಳಕಳಿ ಇರುವವರು ಮಕ್ಕಳಿಗೆ ಪಾಠವನ್ನೂ ಮಾಡಿದ್ದಾರೆ. 48 ಸಾವಿರ ಸರ್ಕಾರಿ ಶಾಲೆಗಳಲ್ಲಿ 14 ಸಾವಿರ ವಾಟ್ಸ್ಆ್ಯಪ್ ಗುಂಪುಗಳಾಗಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತು ದೊಡ್ಡ ಗುರಿ ಹೊಂದಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹ 44 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಸಿಎಸ್‌ಆರ್‌ ನಿಧಿಯಿಂದಲೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ , ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT