ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ ಭೇಟಿಯಾದ ಸಿದ್ದರಾಮಯ್ಯ: ಪ್ರಮುಖ ಯೋಜನೆಗಳ ಅನುಮೋದನೆಗೆ ಮನವಿ

Published 29 ಜೂನ್ 2024, 15:48 IST
Last Updated 29 ಜೂನ್ 2024, 15:48 IST
ಅಕ್ಷರ ಗಾತ್ರ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಭೇಟಿಯಾಗಿ ಕರ್ನಾಟಕದ ಪ್ರಮುಖ ಯೋಜನೆಗಳ ಅನುಮೋದನೆ ಕುರಿತು ಮನವಿ ಮಾಡಿದರು. 

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಹಾಗೂ 400 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು ಅಣೆಕಟ್ಟು ಯೋಜನೆಯ ₹9000 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಬಾಕಿ ಇದೆ. ಮೇಕೆದಾಟು ಯೋಜನೆಗೆ ಪ್ರಧಾನಿಯವರು ಖುದ್ದಾಗಿ ಆಸಕ್ತಿ ವಹಿಸುವಂತೆಯೂ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ ಸುರಂಗ ಮಾರ್ಗಕ್ಕೆ ₹3000 ಕೋಟಿ ವೆಚ್ಚವಾಗಲಿದ್ದು, ಯೋಜನೆಯಿಂದ ಹಲವಾರು ಲಾಭಗಳಿವೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ನ್ನು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸಂಪರ್ಕಿಸುವುದರಿಂದ ಕರ್ನಾಟಕ ಸರ್ಕಾರವು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಕೈಗೊಳ್ಳಬಹುದು. ಕೇಂದ್ರ ಬಜೆಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರ ಅನುದಾನ ನೀಡುವಂತೆ ಮನವಿ ಮಾಡಿದರು. ಮೆಟ್ರೊ ಮೂರನೇ ಹಂತದ ಯೋಜನೆಗೆ ಅನುಮೋದನೆ ನೀಡುವಂತೆ ಕೋರಿದರು. 

ಬಿಬಿಎಂಪಿ ವತಿಯಿಂದ ಘನ ತ್ಯಾಜ್ಯ ನಿರ್ವಹಣೆಗಾಗಿ ₹3,200 ಕೋಟಿ ಅಂದಾಜು ಮೊತ್ತದ ಯೋಜನೆ ಕೈಗೊಳ್ಳುತ್ತಿದ್ದು, ಯೋಜನೆಯ ಶೇ 30ರಷ್ಟು ಅಂದರೆ 960 ಕೋಟಿಗಳನ್ನು ಸ್ವಚ್ಛ ಭಾರತ ಅಭಿಯಾನ 2.0ದಡಿ ಕಾರ್ಯಸಾಧ್ಯತಾ ಅಂತರ ನಿಧಿ ಒದಗಿಸಲು ವಿನಂತಿಸಿದರು.

ಕಲ್ಯಾಣ ಕರ್ನಾಟಕದ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹3000 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದು ಕೇಂದ್ರ ಸರ್ಕಾರವು ತನ್ನ 2024-25 ರ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು. ಕೇಂದ್ರ ಸರ್ಕಾರದ ಅಭಿವೃದ್ಧಿ ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮದಡಿ ಒದಗಿಸುವ ಅನುದಾನ ಹೆಚ್ಚಿಸಲು ಮತ್ತು ಹೊಸ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಧನಸಹಾಯ ನೀಡಬೇಕು ಎಂದು ಅವರು ಮನವಿ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT