ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವಿವಿಗಳಲ್ಲಿ ಇನ್ನು ಶೈಕ್ಷಣಿಕ ಬರಹ ಕೇಂದ್ರ, ಅನುದಾನ ಪಡೆಯಲು ಅನುವು

ಸಂಶೋಧನೆಗಳ ಪ್ರಕಟಣೆ
Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಮೈಸೂರು: ಹಸಿರುಮಯ ಆಪ್ತ ವಾತಾವರಣದಲ್ಲಿ ಸಹಪಾಠಿಗಳು ಹಾಗೂ ಮಾರ್ಗದರ್ಶಕರೊಂದಿಗೆ ಕಾಫಿ ಕುಡಿಯುತ್ತಾ, ಪರಸ್ಪರ ಚರ್ಚಿಸುತ್ತಾ, ಪದಕೋಶ, ಪರಾಮರ್ಶನ ಗ್ರಂಥಗಳನ್ನು ಪಕ್ಕದಲ್ಲಿಟ್ಟುಕೊಂಡು ಸಂಶೋಧನೆ ಬರಹಗಳನ್ನು ಬರೆಯುವಂತಿದ್ದರೆ ಹೇಗೆ? ಅಂಥ ಬರಹಗಳಿಗೆ ಅನುದಾನವೂ ಸಿಗುವಂತಿದ್ದರೆ?

–ಇದೇನೂ ಕಲ್ಪನೆಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ರೂಪುಗೊಳ್ಳಲಿರುವ ಶೈಕ್ಷಣಿಕ ಬರಹ ಕೇಂದ್ರಗಳ (ಅಕಾಡೆಮಿಕ್‌ ರೈಟಿಂಗ್‌ ಸೆಂಟರ್‌) ಅಸಲಿ ಚಿತ್ರಣ. ಎಲ್ಲರಿಗೂ ಅಗತ್ಯಕ್ಕೆ ತಕ್ಕ ಬರಹದ ಕೌಶಲ ಕಲಿಸುವುದೇ ಪ್ರಧಾನ ಆಶಯ.

ವಿದ್ಯಾರ್ಥಿಗಳು ಮತ್ತು ಬೋಧಕರು ತಮ್ಮ ಸಂಶೋಧನೆಗಳನ್ನು ಪ್ರಕಟಿಸಲು ಹಾಗೂ ಬಾಹ್ಯ ಅನುದಾನ ಪಡೆಯಲು ಇಂಥ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಎಲ್ಲ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಅ.1ರಂದು ಇ–ಮೇಲ್‌ ಕಳಿಸಿದ್ದು, ಕೇಂದ್ರದ ರೂಪುರೇಷೆಯ ಮಾರ್ಗಸೂಚಿಯನ್ನೂ ನೀಡಿದೆ.

ಸಾಮಾನ್ಯ, ಸಂಶೋಧನಾ ಹಾಗೂ ಪದವೀಧರರ ಬರಹಗಳು, ಅನುದಾನ, ಉದ್ಯೋಗಕ್ಕಾಗಿ ಸಿದ್ಧಪಡಿಸಬೇಕಾದ ಬರಹಗಳು, ಬೋಧಕರ ಬರಹಗಳನ್ನು ಆದ್ಯತೆ ಮೇರೆಗೆ ಸಿದ್ಧಪಡಿಸುವ ಅಗತ್ಯವನ್ನು ಉಲ್ಲೇಖಿಸಲಾಗಿದೆ. ನಕಲು ತಪ್ಪಿಸುವಂತೆಯೂ ತಿಳಿಸಲಾಗಿದೆ.

‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಯಶಸ್ಸಿಗೆ ಉತ್ತಮ ಬರಹ ಕೇಂದ್ರಗಳಿರಬೇಕೆಂಬುದು ಜಾಗತಿಕವಾಗಿ ಒಪ್ಪಿರುವ ವಿಚಾರ. ಇಂಥ ಕೇಂದ್ರಗಳು ಬರಹಗಾರರೊಂದಿಗೆ ಕಾರ್ಯನಿರ್ವಹಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಬರಹಕ್ಕೆ ಸಂಬಂಧಿಸಿದ ಕೋರ್ಸ್‌ ಹಾಗೂ ವಿಶೇಷ ಕಾರ್ಯಕ್ರಮ ರೂಪಿಸಿ ಮಾರ್ಗದರ್ಶನವನ್ನೂ ನೀಡುತ್ತವೆ. ಓದುವ, ಬರೆಯುವ ಮತ್ತು ಕೇಳಿಸಿಕೊಳ್ಳುವ ಕೌಶಲವನ್ನೂ ಕಲಿಸುತ್ತವೆ’ ಎಂದು ಸ್ಪಷ್ಟಪಡಿಸಲಾಗಿದೆ.

‘ಗುರಿ, ಕಾರ್ಯಸೂಚಿ ಸ್ಪಷ್ಟವಾಗಿರಬೇಕು. ವಾರ್ಷಿಕ ಮೌಲ್ಯಮಾಪನ ನಡೆಯಬೇಕು. ತರಗತಿಗಳ ಬಳಿಕ ನಿರ್ದಿಷ್ಟ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು. ಆಯಾ ವಿ.ವಿ– ಕಾಲೇಜುಗಳೇ ಅನುದಾನ ನೀಡಬೇಕು. ಆಸಕ್ತಿ ಇರುವವರಿಗೇ ಕೇಂದ್ರದ ಹೊಣೆಗಾರಿಕೆ ನೀಡಬೇಕು’ ಎಂದೂ ಸೂಚಿಸಲಾಗಿದೆ.

‘ತರಬೇತುದಾರರಿಗೆ ಅಂತರರಾಷ್ಟ್ರೀಯ ಕೇಂದ್ರದಿಂದ ತರಬೇತಿ ಕೊಡಿಸಬೇಕು. ಅಂತಹ ಸಂಸ್ಥೆಯೊಂದಿಗೆ ಸಹಭಾಗಿತ್ವದ ಜೊತೆ ಸದಸ್ಯತ್ವವನ್ನೂ ಪಡೆಯಬೇಕು. ಕೇಂದ್ರದಲ್ಲಿ ಆಪ್ತ ವಾತಾವರಣ ಇರಬೇಕು’ ಎಂದು ನಿರ್ದೇಶನ ನೀಡಲಾಗಿದೆ.

*
ಶೈಕ್ಷಣಿಕ ಬರಹ ಕೇಂದ್ರವನ್ನು ರೂಪಿಸಲು ಪ್ರಸಾರಾಂಗದ ಸಂಯೋಜನಾಧಿಕಾರಿಗೆ ಹೊಣೆ ನೀಡಲಾಗಿದೆ.
-ಡಾ.ಎ.ಖಾದರ್‌ ಪಾಷಾ, ಪ್ರಭಾರ ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT