ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮೀಸಲು ರದ್ದತಿ ದೋಷಪೂರಿತ ಎಂದ ಕೋರ್ಟ್‌: ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ

Last Updated 14 ಏಪ್ರಿಲ್ 2023, 9:59 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಒಬಿಸಿ ಕೋಟಾ ಮೀಸಲಾತಿ ಯನ್ನು ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ದೋಷ ಪೂರಿತ ಎಂಬ ಹೈಕೋರ್ಟ್‌ ಅಭಿಪ್ರಾಯದಿಂದ ಬಿಜೆಪಿ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ಮುಸ್ಲಿಂ ಮೀಸಲಾತಿ ರದ್ದತಿಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತವಾಗಿತ್ತು. ಚುನಾವಣೆಯನ್ನು ಮನಸ್ಸಲ್ಲಿಟ್ಟುಕೊಂಡು ಹಿಂದೂ ಮತಗಳ ಧ್ರುವೀಕರಣದ ದುರುದ್ದೇಶದ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಲಾದರೂ ವಾಪಸು ಪಡೆದು ಮಾನ ಉಳಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರ ‘ದೋಷಪೂರಿತ’ ಮತ್ತು ‘ತಪ್ಪು ಕಲ್ಪನೆ’ಯನ್ನು ಆಧರಿಸಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಬುನಾದಿಯೇ ಅತ್ಯಂತ ಅಸ್ಥಿರವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿರುವುದು ರಾಜ್ಯ ಬಿಜೆಪಿ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಮುಸ್ಲಿಮರು ಕೇವಲ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ’ ಎಂದು ಚಿನ್ನಪ್ಪ ರೆಡ್ಡಿ ಆಯೋಗ ಪರಿಗಣಿಸಿತ್ತು ಎಂಬ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಹೇಳಿಕೆ ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ‘ಮುಸ್ಲಿಮರು ಸಾಮಾಜಿಕವಾಗಿಯೂ ಹಿಂದುಳಿದಿದ್ದಾರೆ’ ಎಂದು ಚಿನ್ನಪ್ಪ ರೆಡ್ಡಿ ಆಯೋಗ ಹೇಳಿತ್ತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಯನ ಆಧರಿತವಾದ ವರದಿ, ವಿಶ್ವಾಸಾರ್ಹ ಅಂಕಿ-ಅಂಶಗಳ ಸಂಗ್ರಹ ಹೀಗೆ ಯಾವುದೇ ತಯಾರಿ ಇಲ್ಲದೆ ಬಿಜೆಪಿ ಸರ್ಕಾರ ಅತ್ಯವಸರದಿಂದ ಮುಸ್ಲಿಂ ಮೀಸಲಾತಿ ರದ್ದುಪಡಿಸಿರುವುದಕ್ಕೆ ಚುನಾವಣಾ ಲಾಭದ ದುರುದ್ದೇಶ ಬಿಟ್ಟರೆ ಬೇರೆ ಕಾರಣಗಳಿರಲಿಲ್ಲ’ ಎಂದು ತಿಳಿಸಿದ್ದಾರೆ.

‘ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಉಳಿಸಿಕೊಂಡ ಶೇಕಡ 4ರಷ್ಟು ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಿಕೆ ಮಾಡಿರುವುದರಿಂದ ಮುಸ್ಲಿಂ ಮೀಸಲಾತಿ ರದ್ದತಿ ಆದೇಶ ರದ್ದಾದರೆ ಆ ಎರಡೂ ಸಮುದಾಯಗಳಿಗೆ ನೀಡಿರುವ ಹೆಚ್ಚುವರಿ ಮೀಸಲಾತಿಯೂ ರದ್ದಾಗುತ್ತದೆ. ಒಳ ಮೀಸಲಾತಿ ಮತ್ತು ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಪಕ್ಷದ ವಿರೋಧ ಇಲ್ಲ. ಆದರೆ ಕಲ್ಪಿತ ಸುಳ್ಳುಗಳ ಮೂಲಕ ಬಿಜೆಪಿ ಸರ್ಕಾರ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯಲು ಹೊರಟಿದೆ‘ ಎಂದು ಅವರು ಆರೋಪಿಸಿದ್ದಾರೆ.

‘ಒಟ್ಟು ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 75ಕ್ಕೆ ಹೆಚ್ಚಿಸಿ ಪ್ರತಿಯೊಂದು ಜಾತಿಗಳಿಗೆ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದೊಂದೇ ಈಗಿನ ಮೀಸಲಾತಿ ವಿವಾದಕ್ಕೆ ಇರುವ ಶಾಶ್ವತ ಪರಿಹಾರ. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ ಎಲ್ಲ ಜಾತಿ ಜನರಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಲು ಖಂಡಿತ ಕ್ರಮಕೈಗೊಳ್ಳುತ್ತೇವೆ. ಯಾರ ಮೀಸಲಾತಿಯನ್ನೂ ರದ್ದುಗೊಳಿಸದೆ ಸರ್ವಸಮ್ಮತ ಪರಿಹಾರ ನೀಡುತ್ತೇವೆ‘ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

‘ಮೀಸಲಾತಿಗೆ ಶೇಕಡ 50ರ ಮಿತಿ ಎನ್ನುವುದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗವೇ ಹೊರತು ಅದು ಸಾಂವಿಧಾನಿಕವಾದುದೇನಲ್ಲ. ವಿಶೇಷ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬಹುದೆಂದು ಅದೇ ಆದೇಶದಲ್ಲಿ ಹೇಳಲಾಗಿದೆ. ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಆಯೋಗ ಮನೆಮನೆಗೆ ತೆರಳಿ ವೈಜ್ಞಾನಿಕವಾಗಿ ನಡೆಸಿದ್ದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ರಾಜ್ಯ ಬಿಜೆಪಿ ಸರ್ಕಾರದ ಕೈಯಲ್ಲಿದೆ. ಆ ವರದಿ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸಿದರೆ ನ್ಯಾಯಾಲಯ ಕೂಡಾ ಮಾನ್ಯತೆ ನೀಡಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕೇಂದ್ರ ಬಿಜೆಪಿ ಸರ್ಕಾರ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ ಹತ್ತರಷ್ಟು ಮೀಸಲಾತಿ ನೀಡಿ ಶೇಕಡ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸಚಿವ ಸಂಪುಟವು ಮಾರ್ಚ್‌ 27ರಂದು ತೆಗೆದುಕೊಂಡಿರುವ ನಿರ್ಧಾರ ಪ್ರಶ್ನಿಸಿ ಎಲ್‌. ಗುಲಾಮ್ ರಸೂಲ್‌ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯ ವೇಳೆ ನ್ಯಾಯ ಮೂರ್ತಿಗಳಾದ ಕೆ.ಎಂ. ಜೋಸೆಫ್‌ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತ ಪಡಿಸಿತು. ಆಗ ರಾಜ್ಯ ಸರ್ಕಾರದ ಪರವಾಗಿ, ಮಾರ್ಚ್‌ 27ರ ಆದೇಶದ ಆಧಾರದ ಮೇಲೆ ಯಾವುದೇ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶಾತಿ ನೀಡುವುದಿಲ್ಲ ಮತ್ತು ಯಾವುದೇ ಉದ್ಯೋಗಗಳಿಗೆ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಲಾಯಿತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT