ಬೆಂಗಳೂರು:ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ರಾಜ್ಯದ ನಂದಿನಿ ತುಪ್ಪವನ್ನು ಪೂರೈಕೆ ಮಾಡಲಾಗುತ್ತಿದ್ದು, ಟ್ಯಾಂಕರ್ ಮೂಲಕ ತುಪ್ಪ ಸಾಗಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಚಾಲನೆ ನೀಡಿದರು.
ತಿರುಪತಿ ದೇವಸ್ಥಾನಕ್ಕೆ ಶ್ರೀವಾರಿ ಪ್ರಸಾದ ತಯಾರಿಕೆಗೆ ಹಲವು ವರ್ಷಗಳಿಂದ ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ಹೊಂದಿರುವ ನಂದಿನಿ ತುಪ್ಪವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಪೂರೈಸುತ್ತಿದೆ.
2013–14ನೇ ಸಾಲಿನಿಂದ 2021–22ರವರೆಗೆ 5 ಸಾವಿರ ಟನ್ ತುಪ್ಪವನ್ನು ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆರಂಭಿಕವಾಗಿ 350 ಟನ್ ತುಪ್ಪವನ್ನು ಸರಬರಾಜು ಮಾಡಲು ಟೆಂಡರ್ ಮೂಲಕ ಬೇಡಿಕೆ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
2022-23ನೇ ಸಾಲಿನಲ್ಲಿ ಟೆಂಡರ್ ಪ್ರಕ್ರಿಯೆ ವೇಳೆ ತೀವ್ರ ಸ್ಪರ್ಧೆ ಏರ್ಪಟ್ಟ ಕಾರಣ ತಿರುಪತಿ ದೇವಸ್ಥಾನಕ್ಕೆ ಕೆಎಂಎಫ್ ತುಪ್ಪ ಪೂರೈಸಿರಲಿಲ್ಲ. ‘ಈ ಹಿಂದಿನಂತೆಯೇ ತಿರುಪತಿ ತಿರುಮಲ ದೇವಸ್ಥಾನಕ್ಕೆ ತುಪ್ಪ ಪೂರೈಸಲು ಉತ್ಸುಕವಾಗಿದ್ದೇವೆ’ ಎಂದು ಟಿಟಿಡಿ ಆಡಳಿತ ಮಂಡಳಿಗೆ ಕೆಎಂಎಫ್ ಇತ್ತೀಚೆಗೆ ಪತ್ರ ಬರೆದಿತ್ತು.