ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಿತ ಕ್ಲಬ್‌ಗಳಿಗೆ ‘ಮೂಗುದಾರ’: ವಿಶೇಷ ಸದನ ಸಮಿತಿ ಶಿಫಾರಸು

ಪ್ರತ್ಯೇಕ ಕಾಯ್ದೆಗೆ ವಿಧಾನ ಪರಿಷತ್‌ನ ವಿಶೇಷ ಸದನ ಸಮಿತಿ ಶಿಫಾರಸು
Published 15 ಫೆಬ್ರುವರಿ 2024, 16:25 IST
Last Updated 15 ಫೆಬ್ರುವರಿ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ಲಕ್ಷಗಟ್ಟಲೆ ಹಣ ಪಡೆದು ಸದಸ್ಯತ್ವ ಶುಲ್ಕ ನೀಡುವ, ತಮ್ಮದೇ ನಿಯಮಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ, ಶ್ರೀಮಂತರ ಪ್ರತಿಷ್ಠಿತ ತಾಣಗಳೆಂದೇ ಪ್ರಸಿದ್ಧವಾದ ‘ಕ್ಲಬ್‌’ಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಲು ವೇದಿಕೆ ಸಿದ್ಧವಾಗಿದೆ. 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಇರುವ ಕ್ಲಬ್‌ಗಳ ಕಾರ್ಯವೈಖರಿ ಹಾಗೂ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ವಿಧಾನ ಪರಿಷತ್‌ನ ವಿಶೇಷ ಸದನ ಸಮಿತಿ ರಚಿಸಲಾಗಿತ್ತು. ಸಮಿತಿ ಅಧ್ಯಕ್ಷ ಎನ್‌.ರವಿಕುಮಾರ್ ವರದಿಯನ್ನು ಗುರುವಾರ ಪರಿಷತ್‌ನಲ್ಲಿ ಮಂಡಿಸಿದರು.

ಯಾವುದೇ ಕ್ಲಬ್‌ ಸ್ವಂತ ನಿಯಮಗಳನ್ನು ಹೊಂದಲು ಅವಕಾಶ ಇಲ್ಲ; ಎಲ್ಲವೂ ಸರ್ಕಾರದ ನಿಯಮಗಳ ಅಡಿ ಕಾರ್ಯನಿರ್ವಹಿಸುವುದೂ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಮಸೂದೆಯನ್ನು ಮುಂದಿನ ಅಧಿವೇಶನದಲ್ಲೇ ಮಂಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

‘ಟರ್ಪ್‌, ಗಾಲ್ಫ್‌ ಕ್ಲಬ್ ಜಾಗ ವಶಕ್ಕೆ ಪಡೆಯಲು ಶಿಫಾರಸು’

ಬೆಂಗಳೂರು ಟರ್ಫ್‌ ಕ್ಲಬ್‌ ಹಾಗೂ ಗಾಲ್ಫ್‌ ಕ್ಲಬ್‌ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಆ ಎರಡೂ ಕ್ಲಬ್‌ಗಳಿಗೆ ಜಕ್ಕೂರು ಏರೋಡ್ರಮ್‌ ಅಥವಾ ಕುಣಿಗಲ್‌ನಲ್ಲಿ ಜಮೀನು ಮಂಜೂರು ಮಾಡಬೇಕು. ಗಾಲ್ಫ್‌ ಕ್ಲಬ್‌ ಜಾಗವನ್ನು ಹಸಿರು ಉದ್ಯಾನವಾಗಿ ಪರಿವರ್ತಿಸಬೇಕು ಎಂದೂ ಹೇಳಿದೆ. ಪಾರಂಪರಿಕ ಕಟ್ಟಡವಿದ್ದರೂ, ಅನಧಿಕೃತ ಕಟ್ಟಡ ನಿರ್ಮಿಸಿರುವ ಬೌರಿಂಗ್‌ ಕ್ಲಬ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಯನಗರದ ಕಾಸ್ಮೋಪಾಲಿಟನ್‌ ಕ್ಲಬ್‌ಗೆ ವಾಣಿಜ್ಯ ಕಟ್ಟಡದಿಂದ ಪ್ರತಿ ತಿಂಗಳು ಬರುತ್ತಿರುವ ₹18 ಲಕ್ಷ ಆದಾಯದಲ್ಲಿ ಶೇ 25ರಷ್ಟು ಸಮಾಜ ಸೇವೆಗಳಿಗೆ ಬಳಸಬೇಕು. ಉಳಿದ ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು. ಕಬ್ಬನ್‌ ಉದ್ಯಾನದ ವ್ಯಾಪ್ತಿಯಿಂದ ಸೆಂಚುರಿ ಕ್ಲಬ್‌ ಹೊರಗಿಡಲು ಕರ್ನಾಟಕ ಸರ್ಕಾರಿ ಉದ್ಯಾನಗಳ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. 

ಶಾಸಕರಿಗೆ 2 ಕ್ಲಬ್‌ ಸದಸ್ಯತ್ವ

ಸರ್ಕಾರದಿಂದ ವಿನಾಯಿತಿ ದರದಲ್ಲಿ ಜಮೀನು ಹಾಗೂ ಇತರೆ ಸವಲತ್ತು ಪಡೆದಿರುವ ಕ್ಲಬ್‌ಗಳಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಸದಸ್ಯತ್ವ ನೀಡಬೇಕು. ಅವರು ಬಯಸುವ ಯಾವುದೇ ಎರಡು ಕ್ಲಬ್‌ಗಳ ಸದಸ್ಯತ್ವ ಪಡೆಯಲು ಅವಕಾಶ ಇರಬೇಕು ಎಂದು ಸಮಿತಿ ಪ್ರತಿಪಾದಿಸಿದೆ.

ಪ್ರತಿಯೊಂದು ತಾಲ್ಲೂಕಿನಲ್ಲೂ ಕ್ಲಬ್‌ ಆರಂಭಿಸಲು ಸರ್ಕಾರ ಜಮೀನು ಮಂಜೂರು ಮಾಡಬೇಕು. ಹೊಸ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವ ಸಮಯದಲ್ಲಿ ಕ್ಲಬ್‌ ನಿರ್ಮಾಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ಥಳ ನಿಗದಿ ಮಾಡಬೇಕು ಎಂದು ಹೇಳಿದೆ.

ಇತರೆ ಶಿಫಾರಸುಗಳು

* ಸರ್ಕಾರದ ಅನುಮೋದನೆ ಪಡೆದ ಏಕರೂಪದ ಬೈ–ಲಾ ಒಳಗೊಂಡ ಕ್ಲಬ್‌ಗಳಿಗೆ ಮಾತ್ರ ಅನುಮೋದನೆ ನೀಡಬೇಕು

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಾಂಪ್ರದಾಯಿಕ ವಸ್ತ್ರಗಳ ನಿಷೇಧಕ್ಕೆ ಕಡಿವಾಣ ಹಾಕಬೇಕು. ನಾಗರಿಕ ಸಭ್ಯತೆಯ ಉಡುಪುಗಳನ್ನು ಧರಿಸಿದವರಿಗೆ ಪ್ರವೇಶ ನೀಡಬೇಕು

* ಸದಸ್ಯತ್ವ ಶುಲ್ಕ ನಿಗದಿಗೆ ಮಾನದಂಡ ನಿಗದಿ ಮಾಡಬೇಕು. ಅದಕ್ಕಾಗಿ ಸಕ್ಷಮ ಪ್ರಾಧಿಕಾರ ರಚಿಸಬೇಕು

* ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸದಸ್ಯತ್ವ ನೀಡಬೇಕು

* ಲಾಭದಾಯಕ ಕ್ಲಬ್‌ಗಳು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆ ಹಾಗೂ ಶಾಲೆಗಳನ್ನು ದತ್ತು ಪಡೆಯಬೇಕು

* ಸರ್ಕಾರದಿಂದ ಜಮೀನು ಪಡೆದ ಕ್ಲಬ್‌ಗಳ ಜಾಗ ಪುನರ್‌ ಅಳತೆ ಮಾಡಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ಮೂಲ ಸೌಕರ್ಯ, ಆರೋಗ್ಯಕ್ಕೆ (ಹೆಲ್ತ್‌ ಕ್ಲಬ್) ಆದ್ಯತೆ ನೀಡಬೇಕು

* ಸೆಂಚುರಿ ಕ್ಲಬ್‌ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT