ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿ ಕುಂಠಿತ: ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಸದ್ದು

ವಿಧಾನಮಂಡಲ ಅಧಿವೇಶನ
Last Updated 21 ಡಿಸೆಂಬರ್ 2021, 20:01 IST
ಅಕ್ಷರ ಗಾತ್ರ

ಬೆಳಗಾವಿ: ‘ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಮಗಾರಿ, ಮಹದಾಯಿ ಯೋಜನೆ, ನವಲಿ ಸಮತೋಲಿತ ಜಲಾಶಯ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಆಗ್ರಹಿಸಿದರು.

ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತು ಪರಿಷತ್‌ನಲ್ಲಿ ಮಾತನಾಡಿದ ಅವರು, ‘ಯೋಜನೆಗಳಿಗಾಗಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ವಿಜಯಪುರ ಜಿಲ್ಲೆಯ ಬಬಲೇಶ್ವರದ 14 ಹಳ್ಳಿಯ ಸಂತ್ರಸ್ತರಿಗೆ ಜಮೀನಿನ ಮಾರ್ಗಸೂಚಿ ದರ ಪರಿಷ್ಕರಿಸಬೇಕು’ ಎಂದು ಆಗ್ರಹಿಸಿದರು.

‘ಯುಕೆಪಿ ಯೋಜನೆಯ ವೆಚ್ಚ ವರ್ಷದಿಂದ ಹೆಚ್ಚುತ್ತಲೇ ಇದೆ. ಮಹದಾಯಿ ಯೋಜನೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಮಹದಾಯಿಯ ನೀರನ್ನು ಮಲಪ್ರಭೆಗೆ ತಂದು ಕುಡಿಯುವ ಅಗತ್ಯಕ್ಕೆ ಬಳಸುವ ಯೋಜನೆಯಡಿ 4 ಜಿಲ್ಲೆಗಳ 14 ತಾಲ್ಲೂಕುಗಳಿಗೆ ಪ್ರಯೋಜನ ಆಗಲಿದೆ. ಈ ಯೋಜನೆ ಜಾರಿಗೆ ಏಳು ವರ್ಷಗಳಿಂದ ದೊಡ್ಡಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಸರ್ಕಾರ ತಕ್ಷಣ ಟೆಂಡರ್‌ ಕರೆಯಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ, ‘ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚು ವಸತಿ ಶಾಲೆಗಳನ್ನು ತೆರೆಯಲು ಬದ್ಧತೆ ತೋರಿಸಬೇಕು. ಶಿಕ್ಷಣದ ಜೊತೆಗೆ ಕೈಗಾರಿಕೆ ವಿಚಾರದಲ್ಲಿಯೂ ಅಭಿವೃದ್ಧಿಯಾಗಬೇಕು. ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ಹಾವೇರಿ, ಕೊಪ್ಪಳ, ರಾಯಚೂರು ಈ ಪ್ರದೇಶಗಳಲ್ಲಿ ಕೈಗಾರಿಕಾ ಘಟಕಗಳು ಇಲ್ಲ. ಒಟ್ಟಿನಲ್ಲಿ ಈ ಭಾಗದ ನೊಂದ ಜನರಿಗೆ ಹೊಸ ಯೋಜನೆಗಳನ್ನು ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಆ ಮೂಲಕ, ಕೆಲಸ ಇಲ್ಲದೆ ಗುಳೆ ಹೋಗುವುದನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದಾಗ ಮಧ್ಯಪ್ರವೇಶಿಸಿದ ಸಚಿವ ಕೆ.ಎಸ್‌. ಈಶ್ವರಪ್ಪ, ‘ಜಾಬ್‌ ಕಾರ್ಡ್‌ ಕೇಳಿದ ಎಲ್ಲರಿಗೂ ಕೊಡಲು ಸರ್ಕಾರ ಸಿದ್ಧವಿದೆ’ ಎಂದರು.

‘ಉತ್ತರ ಕರ್ನಾಟಕ ಭಾಗ ಇತ್ತೀಚೆಗೆ ಸಾಕಷ್ಟು ಸುಧಾರಣೆ ಆಗಿದೆ. ಏನೂ ಆಗಿಲ್ಲ ಎನ್ನುವ ಭಾವನೆ ಯಾರಲ್ಲೂ ಬೇಡ. ಆದರೆ, ಇನ್ನೂ ಅಭಿವೃದ್ಧಿ ಆಗಬೇಕಿದೆ’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ, ಪ್ರಕಾಶ್‌ ರಾಥೋಡ್‌, ಆರ್‌.ಬಿ. ತಿಮ್ಮಾಪೂರ ಕೂಡಾ ಚರ್ಚೆಯಲ್ಲಿ ಭಾಗವಹಿಸಿದರು.

ಯೋಜನೆ ಪೂರ್ಣಗೊಳಿಸಲು ಆಗ್ರಹ
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ನೀರೊದಗಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರು ಪೂರೈಕೆ ಯೋಜನೆಗಳ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜೆಡಿಎಸ್‌ನ ಸದಸ್ಯರು ವಿಧಾನ ಪರಿಷತ್‌ನಲ್ಲಿ ಆಗ್ರಹಿಸಿದರು.

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಕುರಿತು ಮಂಗಳವಾರ ಚರ್ಚೆ ಆರಂಭಿಸಿ ಮಾತನಾಡಿದ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘ಮಹದಾಯಿ ಕುಡಿಯುವ ನೀರಿನ ಯೋಜನೆ ಎಸ್‌.ಆರ್‌. ಬೊಮ್ಮಾಯಿ ಅವರ ಕನಸಿನ ಕೂಸು. ಅವರ ಮಗ ಬಸವರಾಜ ಬೊಮ್ಮಾಯಿ ಈಗ ಮುಖ್ಯಮಂತ್ರಿ . ಮಹದಾಯಿ ಯೋಜನೆಗೆ ಇರುವ ಎಲ್ಲ ತೊಡಕುಗಳನ್ನೂ ನಿವಾರಿಸಿ ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಮಾತನಾಡಿ, ‘ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ನ್ಯಾಯಮಂಡಳಿಯ ಐತೀರ್ಪು 2050ರಲ್ಲಿ ಮರುಪರಿಶೀಲನೆಗೆ ಒಳಪಡಲಿದೆ. ಅದಕ್ಕೂ ಮೊದಲು ನಮಗೆ ಹಂಚಿಕೆಯಾಗಿರುವ ಎಲ್ಲ ನೀರನ್ನೂ ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT