ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷ ಸ್ಥಾನ: ಲಿಂಬಾವಳಿ ಹೆಸರು ಮುನ್ನೆಲೆಗೆ

Published 2 ಆಗಸ್ಟ್ 2023, 0:34 IST
Last Updated 2 ಆಗಸ್ಟ್ 2023, 0:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆಯ ಕಸರತ್ತು ಮುಂದುವರಿದಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಹೆಸರು ಮುನ್ನೆಲೆಗೆ ಬಂದಿದೆ. 

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ. ರವಿ ಹೆಸರನ್ನು ಕೈಬಿಡಲಾಗಿತ್ತು. ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಚರ್ಚೆಗಳು ನಡೆದಿದ್ದವು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ, ಒಕ್ಕಲಿಗ–ಲಿಂಗಾಯತರ ಮಧ್ಯೆ ಈ ಹುದ್ದೆಗಿರುವ ಪೈಪೋಟಿ ತಪ್ಪಿಸಬೇಕಾದರೆ ಭೋವಿ ಸಮಾಜದವರಾದ ಲಿಂಬಾವಳಿ ಅವರನ್ನೇ ತರುವುದು ಸೂಕ್ತ ಎಂಬ ತೀರ್ಮಾನಕ್ಕೆ ಪಕ್ಷದ ವರಿಷ್ಠರು ಬಂದಿದ್ದಾರೆ. ಬಹುತೇಕ ಅವರ ಹೆಸರೇ ಅಖೈರುಗೊಳ್ಳುವ ಸಾಧ್ಯತೆ ಇದೆ. ಇನ್ನೆರಡು ದಿನಗಳಲ್ಲಿ ಈ ಸಂಬಂಧ ಘೋಷಣೆ ಹೊರಬೀಳಲಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿಯವರಲ್ಲದೇ, ಶೋಭಾ ಕರಂದ್ಲಾಜೆ, ಆರ್.ಅಶೋಕ ಅವರ ಹೆಸರು ಪ್ರಸ್ತಾಪವಾಗಿತ್ತು. ಪಕ್ಷದ ಅಧ್ಯಕ್ಷ ಸ್ಥಾನವನ್ನು ತಮಗೆ ನೀಡಬೇಕು ಎಂದು ವಿ.ಸೋಮಣ್ಣ ಪ‍್ರತಿಪಾದಿಸಿದ್ದರು. ಸಿ.ಟಿ.ರವಿ ನೇಮಕಕ್ಕೆ ಬಿ.ಎಸ್‌.ಯಡಿಯೂರಪ್ಪ ಬಲವಾದ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಮಗ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು.

ಯಡಿಯೂರಪ್ಪ ಅವರ ಬೇಡಿಕೆಯನ್ನು ಒಪ್ಪದ ಪಕ್ಷದ ವರಿಷ್ಠರು ಪರ್ಯಾಯ ನಾಯಕನ ಹುಡುಕಾಟದಲ್ಲಿದ್ದರು. ‘ಈಗ ಪೈಪೋಟಿಯಲ್ಲಿರುವ ಯಾರನ್ನೇ ಮಾಡಿದರೂ ಮುಂದೆ ಸಮಸ್ಯೆಗೆ ಕಾರಣವಾಗಬಹುದು. ಪರಿಶಿಷ್ಟ ಸಮುದಾಯದವರೊಬ್ಬರನ್ನು ನೇಮಕ ಮಾಡಿದರೆ ಸಮಸ್ಯೆ ಆಗುವುದಿಲ್ಲ. ಇದು ಮುಂದೆ ಚುನಾವಣೆಗಳಲ್ಲಿ ಪಕ್ಷಕ್ಕೆ ಲಾಭ ತರಬಹುದು’ ಎಂಬ ಸಲಹೆ ಆರ್‌ಎಸ್‌ಎಸ್‌ನಿಂದ ಬಂದಿತ್ತು. 

ಹೀಗಾಗಿ, ಲಿಂಬಾವಳಿ ಹೆಸರು ಅಧ್ಯಕ್ಷ ಸ್ಥಾನದ ಪರಿಶೀಲನೆಗೆ ಬಂದಿದೆ. ಯಡಿಯೂರಪ್ಪ ಅವರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ, ಯಡಿಯೂರಪ್ಪ ಕೂಡ ಸಹಕಾರ ನೀಡಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ. ಅಧ್ಯಕ್ಷ ಸ್ಥಾನ ಭರ್ತಿ ಆದ ಮೇಲೆ ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ಭರ್ತಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಬಾವಳಿ ಅವರಿಗೆ ಮಹದೇವಪುರದ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ನಿರಾಕರಿಸಲಾಗಿತ್ತು. ಇವರ ಪತ್ನಿ ಮಂಜುಳಾ ಅವರಿಗೆ ಟಿಕೆಟ್‌ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT