ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಗೆ ಸಿದ್ಧತೆ: ಹುರುಪಿನಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ

ಕಾಂಗ್ರೆಸ್‌ ವಿಶ್ವಾಸ ಕುಗ್ಗಿಸಿತೇ ಒಂದು ಸೋಲು?
Published 11 ಜನವರಿ 2024, 5:53 IST
Last Updated 11 ಜನವರಿ 2024, 5:53 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಜೊತೆಗೂಡಿ ಎದುರಿಸಿದ ಮೊದಲ ಚುನಾವಣೆಯಲ್ಲೇ ಜಯಭೇರಿ ಬಾರಿಸಿರುವುದು ಮುಂಬರುವ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಮೈತ್ರಿ ಕೂಟದ ಹುರುಪು ಹೆಚ್ಚಿಸಿದಂತಿದೆ.

ಆಡಳಿತರೂಢ ಕಾಂಗ್ರೆಸ್‌ನ ಸವಾಲು ಎದುರಿಸಿ ಕೋಲಾರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮೊದಲ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಮೈತ್ರಿಕೂಟದ ವಿಶ್ವಾಸ ವೃದ್ಧಿಸಿದೆ. ಒಂದು ತಾಲ್ಲೂಕಿನ ಕೆಲವೇ ಮತದಾರರು ಇರುವ ಸಹಕಾರ ಕ್ಷೇತ್ರದ ಸಣ್ಣ‌ ಚುನಾವಣೆ ಇದಾಗಿದ್ದರೂ ಇದರಲ್ಲಿ ರಾಜಕೀಯದ ಹಲವು ಪಾಠಗಳಿವೆ. ಇದೇ ಕಾರಣಕ್ಕೆ ಸಂಸದ ಎಸ್‌.ಮನಿಸ್ವಾಮಿ ಹಾಗೂ ಜೆಡಿಎಸ್‌ನ ಮುಖಂಡ ಸಿಎಂಆರ್‌ ಶ್ರೀನಾಥ್‌ ಗೆದ್ದ ಅಭ್ಯರ್ಥಿಗಳ ಜೊತೆಗೂಡಿ ಸಂಭ್ರಮಿಸಿದರು. ಉಭಯ ಪಕ್ಷಗಳು ಮುಖಂಡರು ‘ಇದು ಮೊದಲ ಯಶಸ್ವಿ ಹೆಜ್ಜೆ’ ಎಂದು ಬಣ್ಣಿಸುತ್ತಿದ್ದಾರೆ. 

ಮುಂಬರುವ ಲೋಕಸಭೆ ಚುನಾವಣೆಗೆ ಈಗಾಗಲೇ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಆದರೆ, ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ. ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆಯೋ ಅಥವಾ ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿ ಅವರೇ ಮತ್ತೊಮ್ಮೆ ಕಣಕ್ಕಿಳಿಯುತ್ತಾರೋ ಇನ್ನೂ ತೀರ್ಮಾನ ಆಗಿಲ್ಲ.

‘ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳಿಗೆ ಲಭಿಸಿದ ಗೆಲುವಿನಿಂದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಶಕ್ತಿ ಬಂದಿದೆ. ಕಾಂಗ್ರೆಸ್‌ನವರಿಗೆ ಮುಖಭಂಗವಾಗಿದೆ. ಲೋಕಸಭೆ ಚುನಾವಣೆ ಸೇರಿದಂತೆ ಮುಂದೆ ನಡೆಯುವ ಎಲ್ಲಾ ಚುನಾವಣೆಗಳನ್ನು ಮೈತ್ರಿ ಮೂಲಕ ಎದುರಿಸುತ್ತೇವೆ’ ಎಂದು ಸಿಎಂಆರ್‌ ಶ್ರೀನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇತ್ತ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಉಂಟಾದ ಸೋಲಿನ ಬಗ್ಗೆ ಕಾಂಗ್ರೆಸ್‌ನಲ್ಲಿ ವಿಶ್ಲೇಷಣೆ ನಡೆಯುತ್ತಿದೆ. ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಅವರಂಥ ಘಟಾನುಘಟಿಗಳ ತಂತ್ರಗಾರಿಕೆ ಫಲಿಸಿಲ್ಲ.  ವಾರದಿಂದಲೇ ಸಿದ್ಧತೆ ನಡೆಸಿದ್ದರೂ ಹಿನ್ನಡೆ ಉಂಟಾಗಿದೆ. ಜೆಡಿಎಸ್‌ನವರು 8 ಸ್ಥಾನ ತಮ್ಮದಾಗಿಸಿಕೊಂಡರೆ, ಕಾಂಗ್ರೆಸ್‌ನವರಿಗೆ ಲಭಿಸಿದ್ದು 6 ಸ್ಥಾನ.

ಈ ಚುನಾವಣೆ ಫಲಿತಾಂಶ ಪರಿಗಣಿಸಿದರೆ ಒಕ್ಕಲಿಗ ಸಮುದಾಯದವರು ಕಾಂಗ್ರೆಸ್‌ನತ್ತ ಸಂಪೂರ್ಣ ತಿರುಗಿ ಬಿದ್ದಂತಿದೆ. ಈ ವಿಚಾರವನ್ನು ಪಕ್ಷದ ಮುಖಂಡರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣ ಕೂಡ ನೀಡುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಈ ನಾಯಕರಿಗೆ ಈಗಲೇ ಡವಡವ ಶುರುವಾಗಿದೆ, ವಿಶ್ವಾಸ ಕುಗ್ಗಿಸಿದಂತಿದೆ.

‘ಒಂದು ತಾಲ್ಲೂಕಿನ ಕೆಲ ಹೋಬಳಿಯ ಭಾಗದಲ್ಲಿ ಹೆಚ್ಚು ಮತದಾರರು, ಅದರಲ್ಲೂ ಒಂದೇ ಸಮುದಾಯದ ಹೆಚ್ಚು ಮತದಾರರು ಇರುವ ಕೋಲಾರ ಟಿಎಪಿಸಿಎಂಎಸ್ ಚುನಾವಣೆಗೂ ಲೋಕಸಭೆ ಚುನಾವಣೆಗೂ ಹೋಲಿಕೆ ಮಾಡಬಾರದು. ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಿದ್ದು, ಐವರು ಕಾಂಗ್ರೆಸ್‌ ಶಾಸಕರಿದ್ದಾರೆ. ಜೆಡಿಎಸ್‌ನವರು ಕೇವಲ ಮೂವರು ಶಾಸಕರಿದ್ದಾರೆ. ನಮ್ಮ ಪರವಾಗಿ ಗ್ಯಾರಂಟಿ ಯೋಜನೆಗಳಿವೆ’ ಎಂದು ಎಂ.ಎಲ್‌.ಅನಿಲ್‌ ಕುಮಾರ್‌ ಪ್ರತಿಕ್ರಿಯಿಸಿದರು.

ಸಹಕಾರ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರಂಥವರನ್ನು ಅವಿರೋಧ ಆಯ್ಕೆ ಮಾಡುವ ಮೂಲಕ ಸಹಕಾರ ಕ್ಷೇತ್ರಕ್ಕೆ ಗೌರವ ನೀಡುವ ಪ್ರಯತ್ನವೂ ಕಾಂಗ್ರೆಸ್‍ನಿಂದ ಆಗಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ವಿಚಾರ ಕೂಡ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗಿದೆ.

ಎಂ.ಎಲ್‌.ಅನಿಲ್‌ಕುಮಾರ್‌
ಎಂ.ಎಲ್‌.ಅನಿಲ್‌ಕುಮಾರ್‌

‘ಕಾಂಗ್ರೆಸ್‌ ವಿರೋಧಿ ಅಲೆಗೆ ಸಾಕ್ಷಿ’

ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್‌ ವಿಧಾನ ಪರಿಷತ್‌ ಸದಸ್ಯ ಅನಿಲ್‌ ಕುಮಾರ್‌ ತಂತ್ರಗಾರಿಕೆ ಜೊತೆಗೆ ಅವರದ್ದೇ ಸರ್ಕಾರವಿದ್ದರೂ ಕಾಂಗ್ರೆಸ್‌ ಬೆಂಬಲಿತರು ಕೋಲಾರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸೋತಿದ್ದಾರೆ. ಸ್ಥಾನ ಹಂಚಿಕೆ ಮಾಡಿಕೊಳ್ಳೋಣವೆಂದು ಮಾತುಕತೆ ನಡೆಸಿ ಕಾಂಗ್ರೆಸ್‌ನವರು ಮೋಸ ಮಾಡಿದರು. ಆದರೂ ನಾವು ಕೇವಲ 48 ಗಂಟೆಗಳಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡು ಗೆದ್ದೆವು. ಅವರ ಕುತಂತ್ರ ಹಣ ಬಲ ತೋಲ್ಬಲದ ನಡುವೆಯೂ ನಾವು ಸಾಮಾನ್ಯ ವ್ಯಕ್ತಿಗಳನ್ನು ಗೆಲ್ಲಿಸಿದೆವು. ಎಲ್ಲೆಡೆ ಕಾಂಗ್ರೆಸ್‌ ವಿರೋಧಿ ಅಲೆ ಇರುವುದು ಈ ಸೋಲಿಗೆ ಸಾಕ್ಷಿ. ನಂಬಿ ಮತ ಹಾಕಿದ್ದ ಅಲ್ಪಸಂಖ್ಯಾತರು ಕೂಡ ತಿರುಗಿಬಿದ್ದಿದ್ದಾರೆ. ರೈತರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ವಿಫಲವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಹಲವೆಡೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಕೋಲಾರ ಸೇರಿದಂತೆ ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಗೆಲ್ಲಲಿದೆ –ಸಿಎಂಆರ್‌ ಶ್ರೀನಾಥ್‌ ಜೆಡಿಎಸ್‌ ಮುಖಂಡ ಕೋಲಾರ

ಹೋಲಿಕೆ ಮಾಡಬೇಡಿ:

ಅನಿಲ್‌ ಜೆಡಿಎಸ್‌ನ ಸಿಎಂಆರ್‌ ಶ್ರೀನಾಥ್‌ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಿಂದಲೇ ಹೋರಾಟ ಮಾಡಿಕೊಂಡು ಬಂದು ವಿಧಾನಸಭೆ ಚುನಾವಣೆಯಲ್ಲಿ ಸೋತರು. ನಾವು ಕೆಲವೇ ದಿನಗಳಲ್ಲಿ ಕೊತ್ತೂರು ಮಂಜುನಾಥ್‌ ಅವರನ್ನು ಗೆಲ್ಲಿಸಿದೆವು. ಲೋಕಸಭೆ ಚುನಾವಣೆಗೂ ಕೋಲಾರ ಟಿಎಪಿಸಿಎಂಎಸ್‌ ಚುನಾವಣೆಗೂ ಸಂಬಂಧವಿಲ್ಲ. ಎರಡನ್ನೂ ಹೋಲಿಕೆ ಮಾಡುತ್ತಿರುವವರಿಗೆ ರಾಜಕೀಯದ ಜ್ಞಾನವಿಲ್ಲ.

ಕೋಲಾರ ಟಿಎಪಿಸಿಎಂಎಸ್‌ಗೆ 43 ವರ್ಷ ಚುನಾವಣೆಯೇ ನಡೆದಿರಲಿಲ್ಲ. ಜನತಾ ಪರಿವಾರದ ಹಿಡಿತದಲ್ಲಿತ್ತು. 1642 ಮತಗಳಲ್ಲಿ ಶೇ 80ರಷ್ಟು ಒಂದೇ ಸಮುದಾಯದ ಮತಗಳಿವೆ. ಅಲ್ಪಸಂಖ್ಯಾತರಿಗೆ ದಲಿತರಿಗೆ ಹಿಂದುಳಿದವರಿಗೆ ಸದಸ್ಯತ್ವವನ್ನೇ ನೀಡಿಲ್ಲ. ಇದು ಸಹಕಾರ ತತ್ವಕ್ಕೆ ವಿರುದ್ಧವಾದುದು. ಜೆಡಿಎಸ್‌–ಬಿಜೆಪಿ ಮಾತು ನಂಬಿಕೊಂಡು ನಾವು ಹಲವರಿಂದ ನಾಮಪತ್ರ ವಾಪಸ್‌ ತೆಗೆಸಿದೆವು. ಅವರಲ್ಲಿ ಹಾಲಿ ನಿರ್ದೇಶಕರೂ ಇದ್ದರು. ಆದರೆ ಮೈತ್ರಿ ಪಕ್ಷದವರು ನಾಮಪತ್ರ ವಾಪಸ್‌ ತೆಗೆಯದೆ ನಮಗೆ ಮೋಸ ಮಾಡಿದರು. ಇದರಿಂದ ನಮಗೆ ಹಿನ್ನಡೆಯಾಯಿತು
–ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT