ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ನಾಲ್ಕು ಕ್ಷೇತ್ರ: ಹಲವು ಬಗೆಯ ಲೆಕ್ಕಾಚಾರ

Published 13 ಮಾರ್ಚ್ 2024, 0:11 IST
Last Updated 13 ಮಾರ್ಚ್ 2024, 0:11 IST
ಅಕ್ಷರ ಗಾತ್ರ

ನವದೆಹಲಿ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂದು ಖಚಿತವಾದ ಬಳಿಕ ತನ್ನ ಅಭ್ಯರ್ಥಿಯನ್ನು ಪ್ರಕಟಿಸಲು ಬಿಜೆಪಿ ಮುಂದಾಗಿದೆ. 

ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ತಮಗೆ ಟಿಕೆಟ್‌ ನೀಡದಿದ್ದರೆ ಕುಟುಂಬ ಸದಸ್ಯರಿಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರನ್ನು ಕಣಕ್ಕಿಳಿಸುವುದಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ತಮಗೆ ಅಥವಾ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಲಾಬಿ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಅವರನ್ನು ಹುರಿಯಾಳುವನ್ನಾಗಿ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. 

ಸೋಮವಾರ ಇಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ದಾವಣಗೆರೆ ಅಭ್ಯರ್ಥಿಯ ಬಗ್ಗೆ ಚರ್ಚೆಯಾಗಿದೆ. ‘ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಕುಟುಂಬದವರು ಸ್ಪರ್ಧಿಸಿದರೆ ಸಿದ್ದೇಶ್ವರ ಕುಟುಂಬದವರನ್ನು ಕಣಕ್ಕೆ ಇಳಿಸುವುದು, ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಯನ್ನು ಅಭ್ಯರ್ಥಿಯನ್ನಾಗಿ ಮಾಡುವುದು, ಹೊಸಬರಿಗೆ ಮಣೆ ಹಾಕಿದರೆ ನಮ್ಮಲ್ಲೂ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆಗಳು ನಡೆದಿವೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗಲು ಮಾಜಿ ಸಚಿವ ಡಾ.ಕೆ. ಸುಧಾಕರ್‌ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಪುತ್ರ ಅಲೋಕ್ ನಡುವೆ ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿಗಳ ಅಖೈರುಗೊಳಿಸಲು ರಾಜ್ಯದ ಬಿಜೆಪಿ ನಾಯಕರ ಜತೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಳೆದ ವಾರ ಸಭೆ ನಡೆಸಿದ್ದರು. ಡಾ. ಸುಧಾಕರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಸಭೆಯಲ್ಲಿ ಸಹಮತ ವ್ಯಕ್ತವಾಗಿತ್ತು. ಸೋಮವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸುಧಾಕರ್ ಅಭ್ಯರ್ಥಿತನಕ್ಕೆ ಆಕ್ಷೇಪ ವ್ಯಕ್ತವಾಯಿತು. ‘ತಮ್ಮನ್ನು ಕಣಕ್ಕೆ ಇಳಿಸುವಂತೆ ವರಿಷ್ಠರಿಗೆ ಸುಧಾಕರ್‌ ಖುದ್ದು ಮನವಿ ಮಾಡಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್‌ನಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಪ್ರಯತ್ನ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಗ್ಗೆ ಇನ್ನಷ್ಟು ಚರ್ಚೆ ನಡೆಸಿ ತೀರ್ಮಾನಕ್ಕೆ ಬರುವುದು ಉತ್ತಮ’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಹೀಗಾಗಿ, ಕ್ಷೇತ್ರದ ಅಭ್ಯರ್ಥಿಯ ಹೆಸರು ಅಂತಿಮವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. 

ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿ, ಆಡಳಿತ ವಿರೋಧಿ ಅಲೆ ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ‘ಗೋ ಬ್ಯಾಕ್‌ ಶೋಭಾ’ ಅಭಿಯಾನದ ಬಗ್ಗೆ ವರಿಷ್ಠರು ರಾಜ್ಯ ನಾಯಕರಿಂದ ಮಾಹಿತಿ ಪಡೆದರು. ‘ಕೆಲವು ನಾಯಕರು ದುರುದ್ದೇಶಪೂರ್ವಕವಾಗಿ ಈ ಅಭಿಯಾನ ನಡೆಸುತ್ತಿದ್ದಾರೆ. ಶೋಭಾ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಮನದಟ್ಟು ಮಾಡುವ ಪ್ರಯತ್ನ ನಡೆಸಿದರು. ‘2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಜಯ ಗಳಿಸಿದ ಪಕ್ಷದ ಏಕೈಕ ಮಹಿಳಾ ಅಭ್ಯರ್ಥಿಯವರು. ಅವರಿಗೆ ಟಿಕೆಟ್‌ ನಿರಾಕರಿಸಿದರೆ ತಪ್ಪು ಸಂದೇಶ ರವಾನೆಯಾಗಲಿದೆ. ಉಡುಪಿ–ಚಿಕ್ಕಮಗಳೂರಿನಲ್ಲಿ ಹೊಸ ಮುಖಕ್ಕೆ ಮಣೆ ಹಾಕಿ ಬೆಂಗಳೂರು ಉತ್ತರದಲ್ಲಿ ಶೋಭಾ ಅವರನ್ನು ಹುರಿಯಾಳುವನ್ನಾಗಿ ಮಾಡುವುದು ಸೂಕ್ತ’ ಎಂದು ಕೆಲವು ನಾಯಕರು ಸಲಹೆ ನೀಡಿದರು. ಉಡುಪಿ–ಚಿಕ್ಕಮಗಳೂರಿನಿಂದ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆಯೂ ಪ್ರಸ್ತಾಪವಾಯಿತು. ಆದರೆ, ರಾಷ್ಟ್ರ ರಾಜಕಾರಣಕ್ಕೆ ಬರಲು ಕೋಟ ಒಪ್ಪಲಿಲ್ಲ ಎಂದು ಮೂಲಗಳು ತಿಳಿಸಿವೆ. ಶೋಭಾ ಅವರು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 

ಬಿಜೆಪಿ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ‘ಕಡ್ಡಾಯ ನಿವೃತ್ತಿ’ ಬಗ್ಗೆ ವರಿಷ್ಠರು ಸಂದೇಶ ರವಾನಿಸಿದ್ದಾರೆ. ಈ ಸಲ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ದೂರವಾಣಿ ಕರೆ ಮಾಡಿ ಕಟೀಲ್‌ ಅವರಿಗೆ ತಿಳಿಸಿದ್ದಾರೆ.

‘ಕಟೀಲ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಅರುಣ್‌ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ. ಇದರಿಂದಾಗಿ, ಬಿಜೆಪಿ ಮತಗಳು ವಿಭಜನೆಯಾಗಿ ಕಾಂಗ್ರೆಸ್‌ಗೆ ಅನುಕೂಲವಾಗಬಹುದು. ಅದರ ಬದಲು ಹೊಸಬರಿಗೆ ಅವಕಾಶ ನೀಡಿದರೆ ಪುತ್ತಿಲ ಅವರನ್ನು ಮನವೊಲಿಸಬಹುದು’ ಎಂಬ ಚರ್ಚೆ ನಡೆಯಿತು. ಇದಕ್ಕೆ ವರಿಷ್ಠರು ಸಹಮತಿ ಸೂಚಿಸಿದರು ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT