ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಇನ್ನೊಂದು ಸುತ್ತಿನ ಸಮೀಕ್ಷೆ ಬಳಿಕ ಅಭ್ಯರ್ಥಿ ಪಟ್ಟಿ- ಡಿಕೆಶಿ

Published 17 ಫೆಬ್ರುವರಿ 2024, 7:23 IST
Last Updated 17 ಫೆಬ್ರುವರಿ 2024, 7:23 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಇನ್ನೊಂದು ಸುತ್ತಿನ ಸಮೀಕ್ಷೆ ಬಳಿಕ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಇಲ್ಲಿನ ಅಡ್ಯಾರ್‌ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯ ಮಟ್ಟದ ಬೃಹತ್‌ ಸಮಾವೇಶದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದರು.

’ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೇವಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಹಲವು ಸಚಿವರು ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ’ ಎಂದರು.

ಈ ನಗರದಲ್ಲೇ ಏಕೆ ಈ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ಅಸಾಧ್ಯ ಎನ್ನುವುದೂ ಯಾವುದೂ ಇಲ್ಲ. ಈ ಸಲ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಜನ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಇಲ್ಲೇ ಸಮಾವೇಶ ಆಯೋಜಿಸಿದ್ದೇವೆ’ ಎಂದರು.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಈ ಪ್ರದೇಶದ ಕಾಲೇಜುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಉದ್ಯೋಗವನ್ನು ಅರಸಿ ಕೊಲ್ಲಿ ರಾಷ್ಟ್ರಗಳಿಗೆ, ಬೆಂಗಳೂರಿಗೆ ಹಾಗೂ ಮುಂಬೈಗೆ ಹೋಗುತ್ತಿದ್ದಾರೆ. ಇಲ್ಲಿ ಶಾಂತಿ ಕದಡುವ ಯತ್ನಗಳು ಆಗುತ್ತಿವೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಇಳಿಕೆಯಾಗುತ್ತಿದೆ. ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಿಲ್ಲ. ಇಲ್ಲಿನ ವೈದ್ಯಕೀಯ, ಎಂಜಿನಿಯರಿಂಗ್‌ , ಪದವಿಪೂರ್ವ ಕಾಲೇಜುಗಳಿಗೆ ಹಾಗೂ ಶಾಲೆಗಳಿಗೆ ಪೋಷಕರು ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ‌ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ತೊರೆಯುತ್ತಿದ್ದಾರೆ ಎಂದು ಕಾಲೇಜುಗಳ ಆಡಳಿತ ಮಂಡಳಿಯವರು ಅಳಲು ತೋಡಿಕೊಂಡಿದ್ದಾ‌ರೆ’ ಎಂದು ಅವರು ತಿಳಿಸಿದರು.

‘ಬಿಜೆಪಿವರು ಅಭಿವೃದ್ಧಿಯ ಬದಲು, ಧರ್ಮ ಮತ್ತು ಭಾವನಾತ್ಮಕ ವಿಚಾರಗಳಿಗೆ ಆದ್ಯತೆ ನೀಡಿದ್ದರ ಪರಿಣಾಮವಿದು. ನಾವು ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತೇವೆ ಎಂದು ‌ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದೇವೆ. ಇಲ್ಲಿ ಕಡಲ ತೀರ, ಕೆರೆಕಟ್ಟೆಗಳ ಅಭಿವೃದ್ಧಿಗೆ ಹೊಸ ನೀತಿ ರೂಪಿಸುತ್ತೇವೆ. ಈ ಬಗ್ಗೆ ಬಜೆಟ್‌ನಲ್ಲೂ ಉಲ್ಲೇಖಿಸಿದ್ದೇವೆ’ ಎಂದರು.

‘ನಗರಗಳಲ್ಲೂ ಸಂಜೆ 7 ಗಂಟೆ ಬಳಿಕ ಜನರ ಓಡಾಟ ಕಡಿಮೆಯಾಗುತ್ತದೆ. ಹೋಟೆಲ್‌, ಮತ್ತಿತರ ವಹಿವಾಟು ಸ್ಥಬ್ಧಗೊಳ್ಳುತ್ತಿದೆ. ಜನರ ಸ್ವಾಭಿಮಾನದ ಪ್ರತೀಕವಾಗಿದ್ದ ಬ್ಯಾಂಕ್‌ಗಳೂ ವಿಲೀನವಾಗುತ್ತಿವೆ. ವ್ಯಾಪಾರ ವಹಿವಾಟು ನಡೆದರೆ ಮಾತ್ರ ಜನರಿಗೆ ಉದ್ಯೋಗ ಸಿಗುತ್ತದೆ. ಜನರು ಮನೆಯಲ್ಲಿ ಕುಳಿತುಕೊಂಡರೆ ವ್ಯಾಪಾರ ನಡೆಯುವುದಿಲ್ಲ. ದೇವಸ್ಥಾನದಲ್ಲಿ ಜನ ಹೇಗೆ ಭಕ್ತಿಯಿಂದ ಇರುತ್ತಾರೋ ಹಾಗೆಯೇ ವ್ಯಾಪಾರ ವಹಿವಾಟೂ ನಡೆಯಬೇಕಲ್ಲವೇ’ ಎಂದು ಪ್ರಶ್ನಿಸಿದರು.

ಜೆರೋಸಾ ಶಾಲೆಯ ವಿವಾದಕ್ಕೆ ಸಂಬಂಧಿಸಿ ಶಾಸಕರಿಬ್ಬರ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದು ಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ‘ಬಿಜೆಪಿಯವರು ಪ್ರತಿಭಟನೆ ಮಾಡುತ್ತಾ ಇರಲಿ. ಅವರೇನು ಮಾಡುತ್ತಾರೋ ಮಾಡಲಿ. ಪೊಲೀಸರು ತನಿಖೆ ಮಾಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತಾರೆ’ ಎಂದರು.

‘ಬಜೆಟ್‌ನಲ್ಲಿ ಮುಸ್ಲಿಮರ ಓಲೈಕೆ ಮಾಡಲಾಗಿದೆ’ ಶಾಸಕ ಹರೀಶ್‌ ಪೂಂಜ ಮಾಡಿರುವ ಆರೊಪಕ್ಕೆ ಪ್ರತಿಕ್ರಿಯಿಸಿದ ಅವರು, ‘ ₹3.71 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ಮುಸ್ಲಿಮರಿಗೆ ₹3 ಸಾವಿರ ಕೋಟಿ ಕೊಟ್ಟಿದ್ದು ತಪ್ಪಾ. ಒಟ್ಟು ಬಜೆಟ್‌ ಗಾತ್ರದಲ್ಲಿ ಅವರ ಸಮುದಾಯಕ್ಕೆ ಶೇ 1ರಷ್ಟೂ ಅನುದಾನ ಕೊಡಬಾರದಾ?. ಸುಮ್ಮನೆ ರಾಜಕೀಯವಾಗಿ ಟೀಕೆ ಮಾಡುತ್ತಾರೆ. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆಯೇ’ ಎಂದರು

ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ವಿರುದ್ಧ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್ ಅವರು ಕಣಕ್ಕಿಳಿಸಲು ಸಿದ್ಧತೆ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್‌, ‘ನಾನು ಎಚ್‌.ಡಿ.ದೇವೇಗೌಡ ಅವರ ವಿರುದ್ಧ 1985ರಲ್ಲಿ ಹಾಗೂ 1990ರಲ್ಲಿ ಸ್ಪರ್ಧಿಸಿದ್ದೆ. ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದೆ. ಜೆಡಿಎಸ್‌ ಮತ್ತು ಬಿಜೆಪಿ ಇಬ್ಬರೂ ಸೇರಿ ನನ್ನ ತಮ್ಮನ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಧರ್ಮಪತ್ನಿ ಅವರನ್ನು ನಿಲ್ಲಿಸಿದ್ದರು. ಆಗಲೂ 1.30 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದೇವೆ. ಚಕ್ರವರ್ತಿ ಅಶೋಕ್‌ ನನ್ನ ವಿರುದ್ಧ ಚುನಾವಣೆಗೆ ನಿಂತಿದ್ದರು. ಕುಮಾರಸ್ವಾಮಿ ಬೇಕಾದರೂ ನಿಲ್ಲಲಿ ಯಾರೂ ಬೇಕಾದರೂ ನಿಲ್ಲಲಿ. ರಾಜಕಾರಣದಲ್ಲಿ ಜನ ತೀರ್ಮಾನ ಮಾಡುತ್ತಾರೆ. ಮತದಾರರು ಪ್ರಜ್ಞಾವಂತರಿದ್ದಾರೆ. ಅವರೇ ಉತ್ತರ ಕೊಡುತ್ತಾರೆ. ಯಾರು ಸ್ಪರ್ಧಿಸಿದರೂ ನಮ್ಮ ಅಭ್ಯಂತರ ಇಲ್ಲ’ ಎಂದರು.

‘ಡಿ.ಕೆ.ಸುರೇಶ್‌ ದೆಹಲಿಯಲ್ಲಿ ಕುಳಿತುಕೊಳ್ಳುವ ಸಂಸದ ಅಲ್ಲ. ಹಳ್ಳಿಯಲ್ಲಿದ್ದುಕೊಂಡು ಕೆಲಸ ಮಾಡುವ ಸಂಸದ. ಅವರು ತಳಮಟ್ಟದ ಕೆಲಸಗಾರ ಎಂಬ ಭಾವನೆ ಮತದಾರರಲ್ಲಿದೆ. ಆ ಕ್ಷೇತ್ರದಲ್ಲಿ ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಅನೇಕರು ಸಂಸದರಾಗಿದ್ದರು. ಆ ಎಲ್ಲ ಸಂಸದರಿಗೂ ಸುರೇಶ್‌ಗೂ ಏನು ವ್ಯತ್ಯಾಸ ಎಂಬುದನ್ನು ಜನ ನೋಡಿದ್ದಾರೆ. ಪ್ರತೀ ಹಳ್ಳೀ, ಪ್ರತೀ ಪಂಚಾಯಿತಿ, ಪ್ರತೀ ರಸ್ತೆ , ಪ್ರತೀ ಚರಂಡಿ, ಪ್ರತೀ ಕೆರೆಯ ಅಭಿವೃದ್ಧಿ ಮಾಡಿಸಿದ್ದಾರೆ. ಅಂತರ್ಜಲ ಹೆಚ್ಚಳ, ಬಡವರಿಗೆ ನಿವೇಶನ, ಮನೆ ಹಂಚಿಕೆಗೆ ಕ್ರಮಕೈಗೊಂಡಿದ್ದಾರೆ. ನರೇಗಾ ಯೋಜನೆಯಡಿ ಕ್ಷೇತ್ರಕ್ಕೆ ಅಷ್ಟೆಲ್ಲ ಅನುದಾನ ಬಂದಿದ್ದರೆ, ಅದು ಸುರೇಶ್‌ ಕೊಡುಗೆ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT