ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ಕೊಕ್ಕರೆಗಳಿಗೆ ನೀರು–ಆಹಾರ ಕೊರತೆ

ಬರಿದಾದ ಶಿಂಷಾ ನದಿ, ಕೆರೆ, ಕಟ್ಟೆಗಳ ಒಡಲು, ಮಾಯವಾದ ಹಸಿರು ಪರಿಸರ
ಅಣ್ಣೂರು ಜಗದೀಶ್‌
Published 4 ಮೇ 2024, 22:20 IST
Last Updated 4 ಮೇ 2024, 22:20 IST
ಅಕ್ಷರ ಗಾತ್ರ

ಭಾರತೀನಗರ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿಂಷಾ ನದಿಯು ಬರಗಾಲದಿಂದ ಬರಿದಾಗಿದ್ದು, ಸಮೀಪದ ಪ್ರಸಿದ್ಧ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಕೊಕ್ಕರೆಗಳು ನೀರು– ಆಹಾರದ ಕೊರತೆಯಿಂದ ಪರಿತಪಿಸುತ್ತಿವೆ.

ನದಿ ತೀರದ ಹಸಿರು ಪರಿಸರ, ಮರ– ಗಿಡಗಳ ಸಾಲು, ಸಮೀಪದ ಕೆರೆ, ಕಟ್ಟೆಗಳಲ್ಲಿ ದೊರೆಯುತ್ತಿದ್ದ ಮೀನುಗಳು ಕೊಕ್ಕರೆಗಳಿಗೆ ಪ್ರಾಕೃತಿಕವಾದ ಆವಾಸಸ್ಥಾನ ನಿರ್ಮಿಸಿತ್ತು. ಅವುಗಳ ಸಂತಾನೋತ್ಪತ್ತಿಗೂ ಹೇಳಿ ಮಾಡಿಸಿದಂತಿತ್ತು. ಆದರೆ ಈಗ ವಾಸಕ್ಕೆ ತೊಂದರೆಯಾಗಿದೆ. ಪ್ರತಿ ವರ್ಷ ಒಂದು ಸಾವಿರಕ್ಕೂ ಹೆಚ್ಚು ಪೆಲಿಕಾನ್‌ (ಹೆಜ್ಜಾರ್ಲೆ) ಹಾಗೂ 2 ಸಾವಿರಕ್ಕೂ ಹೆಚ್ಚು ಪೇಂಟೆಡ್‌ ಸ್ಟಾರ್ಕ್‌ (ಬಣ್ಣದ ಕೊಕ್ಕರೆ) ಭೇಟಿ ನೀಡುತ್ತವೆ.

ಗ್ರಾಮದ ಸುತ್ತಮುತ್ತಲಿನ ತೈಲೂರು ಕೆರೆ, ಮದ್ದೂರುಕೆರೆ, ಸೂಳೆಕೆರೆ, ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ಯಾರೇಜ್‌ ಹಾಗೂ ಮಾದರಹಳ್ಳಿ ಕೆರೆ ಬತ್ತಿದೆ. ಕೆರೆಯಲ್ಲಿ ಮೀನುಗಳ ಸಾಕಣೆಯೂ ನಡೆಯದಿರುವುದರಿಂದ, ಕೊಕ್ಕರೆಗಳ ಪ್ರಮುಖ ಆಹಾರವೂ ಇಲ್ಲವಾಗಿದೆ.

ಡಿಸೆಂಬರ್‌ನಲ್ಲಿ ಬಂದು ಜೂನ್‌ವರೆಗೂ ಇಲ್ಲಿಯೇ ಬೀಡು ಬಿಡುತ್ತಿದ್ದ ಹೆಜ್ಜಾರ್ಲೆಗಳು ಈಗ ನಿರ್ಗಮಿಸಿವೆ. ಸದ್ಯ ಪಕ್ಷಿಧಾಮದಲ್ಲಿ ಸಾವಿರಾರು ಬಣ್ಣದ ಕೊಕ್ಕರೆಗಳು ಸಂಕಷ್ಟದಲ್ಲೇ ದಿನ ದೂಡುತ್ತಿವೆ. ಮರಿಗಳು ನೀರಿನ ಕೊರತೆಯಿಂದ ಮರದ ಮೇಲಿಂದ ಬೀಳುತ್ತಿವೆ. ನದಿಯ ಮರಳು ತೆಗೆಸಿ ನೀರಿನ ಬುಗ್ಗೆಗಾಗಿ ಅರಣ್ಯ ಇಲಾಖೆ ನಡೆಸಿದ ಹುಡುಕಾಟವೂ ವಿಫಲವಾಗಿದೆ.

‘ಕೊಕ್ಕರೆಗಳ ಅನುಕೂಲಕ್ಕಾಗಿ ವನದಾಸಿ ಕಟ್ಟೆ ನಿರ್ಮಿಸಲಾಗಿತ್ತು. ಈಗ ಅಲ್ಲಿಯೂ ನೀರಿಲ್ಲ. ಸಮೀಪದ ಸರ್ಕಾರಿ ಶಾಲೆಯ ಕೊಳವೆ ಬಾವಿಯಿಂದ ನೀರು ತುಂಬಿಸಲು ಯೋಜಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಬರಗಾಲ ಬಂದಾಗಲೆಲ್ಲಾ ಇದೇ ಪರಿಸ್ಥಿತಿ ಇರುತ್ತದೆ. 1998ರ ಬರ ಪರಿಸ್ಥಿತಿಯ ನಂತರ, ಇಲ್ಲಿಗೆ ಬರುತ್ತಿದ್ದ ಕೊಕ್ಕರೆಗಳ ಸಂಖ್ಯೆ ಕ್ಷೀಣಿಸಿತ್ತು. ಇದೇ ಪರಿಸ್ಥಿತಿ ಮುಂದುವರಿದರೆ ಕೊಕ್ಕರೆಗಳೇ ಬಾರದ ಪರಿಸ್ಥಿತಿ ಎದುರಾಗಬಹುದು’ ಎಂದು ಪಕ್ಷಿ‍ಪ್ರಿಯರು ಹೇಳುತ್ತಾರೆ.

‘ಪಕ್ಷಿಗಳಿಗೆ ನೀರು, ಆಹಾರ ಪೂರೈಸುವ ಶಾಶ್ವತ ಯೋಜನೆಯೊಂದನ್ನು ಜಾರಿಗೊಳಿಸಬೇಕು ಎಂಬ ನಮ್ಮ ಬೇಡಿಕೆಯು ವರ್ಷಗಳಾದರೂ ಸಾಕಾರಗೊಂಡಿಲ್ಲ. ಪಕ್ಷಗಳು ಬಳಲಿ ಮರದಿಂದ ಬೀಳುವುದನ್ನು ನೋಡಲು ಆಗುತ್ತಿಲ್ಲ. ಅವುಗಳಿಗೆ ಕುಡಿಯಲು ನೀರನ್ನಾದರೂ ಪೂರೈಸಬೇಕು’ ಎಂದು ಹೆಜ್ಜಾರ್ಲೆ ಬಳಗದ ಮುಖ್ಯಸ್ಥ ಲಿಂಗೇಗೌಡ ಒತ್ತಾಯಿಸಿದರು.

ಬಿರು ಬಿಸಿಲಿನಲ್ಲಿಯೇ ಮರಗಳಲ್ಲಿ ಆಶ್ರಯ ಪಡೆದಿರುವ ಬಣ್ಣದ ಕೊಕ್ಕರೆಗಳು.
ಬಿರು ಬಿಸಿಲಿನಲ್ಲಿಯೇ ಮರಗಳಲ್ಲಿ ಆಶ್ರಯ ಪಡೆದಿರುವ ಬಣ್ಣದ ಕೊಕ್ಕರೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT