ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಸ್ನೇಹಿ ಆಡಳಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು

ವಿವಿಧ ಇಲಾಖೆಗಳ ಟೆಂಡರ್‌ಗಳ ಪ್ರಕ್ರಿಯೆ ಸ್ಥಿತಿಗತಿ ಅವಲೋಕನ
Published 13 ಜೂನ್ 2024, 15:33 IST
Last Updated 13 ಜೂನ್ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತದಲ್ಲಿ ಬಿಗಿತಂದು ಸರ್ಕಾರವನ್ನು ಇನ್ನಷ್ಟು ಜನಸ್ನೇಹಿಯಾಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಹೋದ್ಯೋಗಿಗಳಿಗೆ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಲೋಕಸಭಾ ಚುನಾವಣೆ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಹೆಚ್ಚು ವಿಷಯಗಳಿಲ್ಲದಿದ್ದರೂ ಆಡಳಿತ ಸುಧಾರಣೆ ಕುರಿತು ವಿಸ್ತೃತ ಚರ್ಚೆ ನಡೆಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಆಡಳಿತವನ್ನು ಚುರುಕುಗೊಳಿಸಬೇಕು. ಜನರಿಗೆ ಅನಗತ್ಯ ತೊಂದರೆ ಆಗುವುದನ್ನು ತಪ್ಪಿಸಲು ಎಲ್ಲ ಕೆಲಸಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಬೇಕು ಎಂದು ಹೇಳಿದ ಸಿದ್ದರಾಮಯ್ಯ ಅವರು ಅದಕ್ಕೆ ಅಗತ್ಯ ಮಾರ್ಗದರ್ಶನ ಮತ್ತು ನಿರ್ದೇಶನವನ್ನೂ ನೀಡಿದರು. ಜನತಾದರ್ಶನವನ್ನು ನಿಯಮಿತವಾಗಿ ನಡೆಸಬೇಕು. ಜನರ ಅಹವಾಲುಗಳು ಮತ್ತು ಬೇಡಿಕೆಗಳನ್ನು ನಿರ್ಲಕ್ಷಿಸದೇ ಗಂಭೀರವಾಗಿ ತೆಗೆದುಕೊಂಡು ಅವುಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾಗಿ ಪಾಟೀಲ ಹೇಳಿದರು.

ಸರ್ಕಾರದ ಆಡಳಿತವನ್ನು ಇನ್ನಷ್ಟು ಜನಸ್ನೇಹಿ ಮಾಡಲು ಏನೇನು ಮಾಡಬೇಕು ಎಂಬ ಸಲಹೆಯನ್ನೂ  ಸಿದ್ದರಾಮಯ್ಯ ಸಚಿವರಿಂದ ಕೇಳಿದರು ಎಂದು ಅವರು ವಿವರಿಸಿದರು.

‘ಈ ಹಂತದಲ್ಲಿ ಆಡಳಿತ ಬಿಗಿ ಮಾಡುವ ಬಗ್ಗೆ ಸುದೀರ್ಘ ಚರ್ಚೆಯ ಅಗತ್ಯವೇನು’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆ ಮಧ್ಯೆ ಆಡಳಿತ ಹೇಗೆ ನಡೆದಿದೆ ಎಂಬುದು ಫಲಿತಾಂಶದಲ್ಲಿ ವ್ಯಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪ ಆಯಿತು ಎಂದು ಪಾಟೀಲ ಹೇಳಿದರು.

ಟೆಂಡರ್‌ಗಳ ಅವಲೋಕನ:

2023ರ ನವೆಂಬರ್‌ 23ರಿಂದ 2024ರ ಮಾರ್ಚ್‌ 14ರವರೆಗೆ ವಿವಿಧ ಇಲಾಖೆಗಳಲ್ಲಿ ಒಟ್ಟು 147 ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಇವುಗಳ ಸ್ಥಿತಿಗತಿಯನ್ನು ಸಂಪುಟ ಸಭೆಯಲ್ಲಿ ಅವಲೋಕಿಸಲಾಯಿತು ಎಂದು ಅವರು ಹೇಳಿದರು.

ಈ ಪೈಕಿ 94 ಪ್ರಸ್ತಾವಗಳಿಗೆ ಟೆಂಡರ್‌ ಆಹ್ವಾನಿಸಲಾಗಿದ್ದು, 19 ಟೆಂಡರ್‌ ಪ್ರಸ್ತಾವಗಳು ಪರಿಶೀಲನೆ ಹಂತದಲ್ಲಿವೆ. 18 ಪ್ರಸ್ತಾವಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಕಾಮಗಾರಿಗಳು ಮುಕ್ತಾಯಗೊಂಡಿವೆ. 53 ಪ್ರಸ್ತಾಪಗಳಿಗೆ ಟೆಂಡರ್‌ ಕರೆಯಲು ಬಾಕಿ ಇವೆ ಎಂದು ಪಾಟೀಲ ತಿಳಿಸಿದರು.

2025ರ ಫೆ.12ರಿಂದ ‘ಇನ್‌ವೆಸ್ಟ್‌ ಕರ್ನಾಟಕ’ * 2025ರ ಫೆಬ್ರುವರಿ 12 ರಿಂದ 14ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ‘ಇನ್ವೆಸ್ಟ್‌ ಕರ್ನಾಟಕ 2025’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸುವ ಸಂಬಂಧ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ₹75 ಕೋಟಿ ಒದಗಿಸಲಾಗಿದ್ದು ₹15 ಕೋಟಿ ಹೆಚ್ಚುವರಿ ಅನುದಾನ ಒದಗಿಸಲು ಅನುಮೋದನೆ ನೀಡಲಾಗಿದೆ. * ಬಂಡವಾಳ ಹೂಡಿಕೆ ಆಕರ್ಷಣೆಗಾಗಿ ನಾಲೆಜ್‌ ಪಾರ್ಟ್‌ನರ್‌ ನೇಮಕ ಮಾಡಲು ಟೆಂಡರ್‌ ಕರೆದಿದ್ದು ಮೆ. ಬೋಸ್ಟನ್‌ ಕನ್ಸಲ್ಟಂಟ್‌ ಅವರಿಗೆ ಅನುಮೋದನೆ ನೀಡಲಾಗಿದೆ. *ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಒಟ್ಟು 112 ಹೊಸ ಪೂರ್ಣ ಕವಚ ನಿರ್ಮಿತ ಬಿಎಸ್‌–4 ವೇಗದೂತ ಬಸ್‌ಗಳನ್ನು ₹46.48 ಕೋಟಿ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ. 62 ಹೊಸ ಬಸ್‌ಗಳನ್ನು ಖರೀದಿಸಲು 50 ಬಸ್‌ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ವರ್ಗಾಯಿಸಲು ಒಪ್ಪಿಗೆ. *ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ₹12 ಕೋಟಿ ವೆಚ್ಚದಲ್ಲಿ ನಾಲ್ಕು ಕೋರ್ಟ್‌ ಹಾಲ್‌ಗಳ ನಿರ್ಮಾಣಕ್ಕೆ ಒಪ್ಪಿಗೆ

ವೇತನ ಪರಿಷ್ಕರಣೆ: ನಿರ್ಣಯವಿಲ್ಲ ಏಳನೇ ವೇತನ ಆಯೋಗದ ಶಿಫಾರಸಿನ ಅನುಸಾರ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆ ಆಯಿತು. ಆದರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು. ವಿಧಾನಮಂಡಲ ಅಧಿವೇಶನ ನಡೆಸಲು ಸಭೆಯಲ್ಲಿ ಒಲವು ವ್ಯಕ್ತವಾಗಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT