ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹500 ಕೋಟಿ ವೆಚ್ಚದಲ್ಲಿ ಯುವಿಸಿಇ ಅಭಿವೃದ್ಧಿ: ಸಚಿವ ಎಂ.ಸಿ.ಸುಧಾಕರ್

Published 6 ಫೆಬ್ರುವರಿ 2024, 15:48 IST
Last Updated 6 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾಯತ್ತ ವಿಶ್ವವಿದ್ಯಾಲಯವಾಗಿರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು (ಯುವಿಸಿಇ) ₹500 ಕೋಟಿ ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.

ಯುವಿಸಿಇ ಮತ್ತು ನೃಪತುಂಗ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಈಗಾಗಲೇ ಮೊದಲ ಹಂತದಲ್ಲಿ ₹87 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ನೂತನ ಕಟ್ಟಡಗಳ ಕಾಮಗಾರಿ ಒಂದು ವರ್ಷವಾದರೂ ಬುನಾದಿ ಹಂತದಿಂದ ಮೇಲೆದ್ದಿಲ್ಲ. ಕೊಟ್ಟಿರುವ ಗಡುವು 24 ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿದ್ದರೆ ದಂಡ ವಿಧಿಸುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಕಾಲೇಜಿಗೆ ಅತ್ಯಾಧುನಿಕ ಪ್ರಯೋಗಾಲಯ ಉಪಕರಣಗಳ ಅಗತ್ಯವಿದೆ. ಬೇರೆ ಸಂಸ್ಥೆಗಳಿಗೂ ಯುವಿಸಿಇಗೂ ಹೋಲಿಸಿದರೆ ತುಂಬಾ ಹಳೆಯ ಯಂತ್ರಗಳಿವೆ. ಮೆಕ್ಯಾನಿಕಲ್‌ ವಿಭಾಗಕ್ಕೆ ವೋಲ್ವೊ, ಟೊಯೊಟಾ ಸೇರಿದಂತೆ ಹಲವು ಸಂಸ್ಥೆಗಳು ಎಂಜಿನ್‌ ಹಾಗೂ ಇತರೆ ಬಿಡಿಭಾಗಗಳನ್ನು ನೀಡಿವೆ. ಇವತ್ತಿನ ಕಾಲಕ್ಕೆ ಅವು ಸಾಲದಾಗಿವೆ ಎಂದರು.

ಏಳು ಅಂತಸ್ತಿನ ಕಟ್ಟಡ:

ನೃಪತುಂಗ ವಿಶ್ವವಿದ್ಯಾಲಯದಲ್ಲಿ ₹57 ಕೋಟಿ ವೆಚ್ಚದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜತೆಗೆ ಅಂದಾಜು ₹30 ಕೋಟಿ ವೆಚ್ಚದಲ್ಲಿ ಆಡಳಿತ ಮಂಡಳಿ ನಿರ್ಮಾಣಕ್ಕೆ ನೀಲನಕ್ಷೆ ರಚಿಸಲಾಗಿದೆ. ವಿಶ್ವ ಬ್ಯಾಂಕ್‌ನಿಂದ ವಿವಿಧ ಉದ್ಧೇಶಗಳಿಗಾಗಿ ಇಲಾಖೆಗೆ ಪಡೆಯುವ ಸಾಲದಲ್ಲಿ ಇನ್ನಷ್ಟು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. 

ನೃಪತುಂಗ ವಿಶ್ವವಿದ್ಯಾಲಯದ ಆವರಣದ ತುಂಬೆಲ್ಲ ಕಟ್ಟಡವೇ ಆಗಿದೆ. ಹಳೆಯ ಕಟ್ಟಡದ ಮುಂಭಾಗವಿದ್ದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ.  ಮುಂದಾಲೋಚನೆ ಮಾಡಿ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ್ದರೆ ಸ್ವಲ್ಪವಾದರೂ ಮೈದಾನ ಸಿಗುತ್ತಿತ್ತು ಎಂದರು.

7ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಲು ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಯುವಿಸಿಇ ಸಿಬ್ಬಂದಿ ಸಚಿವರಿಗೆ ಮನವಿ ಮಾಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT