ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ನೀರಾವರಿ: ಬಾಕಿ ಕಾಮಗಾರಿಗೆ ₹12,696 ಕೋಟಿ ಅಗತ್ಯ- ಸಿದ್ದರಾಮಯ್ಯ

ಬಾಕಿ ಮೊತ್ತ ಅಧಿಕ, ಆರಂಭವಾಗದ ಯೋಜನೆಗಳಿಗೂ ತೊಡಕು: ಸಿದ್ದರಾಮಯ್ಯ
Published 12 ಅಕ್ಟೋಬರ್ 2023, 16:10 IST
Last Updated 12 ಅಕ್ಟೋಬರ್ 2023, 16:10 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ನೀರಾವರಿ ಇಲಾಖೆಯಲ್ಲಿ ಹಿಂದೆ ನಡೆಸಿದ ಕಾಮಗಾರಿಗಳ ಬಾಕಿ ಬಿಲ್ ಮೊತ್ತ ₹3,036 ಕೋಟಿ ತಲುಪಿದ್ದು, ಹೊಸ ಕಾಮಗಾರಿಗಳನ್ನು ಆರಂಭಿಸಲಾಗದ ಸ್ಥಿತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಡೆದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಅವರು, ಹಿಂದಿನ ಬಿಜೆಪಿ ಸರ್ಕಾರ ಎರಡು ವರ್ಷಗಳ ಅವಧಿಯಲ್ಲಿ ಬಜೆಟ್‌ನಲ್ಲಿ ಮೀಸಲಿಟ್ಟ ಹಣಕ್ಕಿಂತ ಮೂರುಪಟ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. 2018ರಲ್ಲಿ ₹440 ಕೋಟಿ ಇದ್ದ ಬಾಕಿ ಮೊತ್ತ ಈಗ ಭಾರಿ ಪ್ರಮಾಣಕ್ಕೆ ಏರಿದೆ. ಆರಂಭಿಸಬೇಕಾಗಿದ್ದ ಕಾಮಗಾರಿಗಳಿಗೆ ಇದು ತೊಡಕಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಗೆ ಮಂಜೂರಾದ ಕಾಮಗಾರಿ ಕೈಗೊಳ್ಳಲು ₹22,304 ಕೋಟಿ ಇತ್ತು. ಈ ವರ್ಷದ ಮಾರ್ಚ್‌ ವೇಳೆಗೆ ₹9,602.37 ಕೋಟಿ ವೆಚ್ಚವಾಗಿದೆ. 2023-24ನೇ ಸಾಲಿಗೆ ಬಾಕಿ ಕಾಮಗಾರಿ ಕೈಗೊಳ್ಳಲು ₹12,696.35 ಕೋಟಿ ಬೇಕಿದೆ. ಕಾಮಗಾರಿ ಪ್ರಾರಂಭವಾಗಿದ್ದರೆ ಅಂತಹ ಯೋಜನೆಗಳನ್ನು ಮುಂದುವರೆಸಬೇಕು. ಪ್ರಾರಂಭವಾಗದ ಕಾಮಗಾರಿಗಳನ್ನು ಕೈಬಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ 34 ಸಾವಿರ ಕೆರೆಗಳ ಸಮಗ್ರ ನಿರ್ವಹಣೆ ಕುರಿತು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ಪ್ರಸ್ತಾವವನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆರೆ ಬಳಕೆದಾರರ ಸಂಘಗಳಿಗೆ ಅಧಿಕಾರೇತರ ಸದಸ್ಯರ ನೇಮಕ ಮಾಡುವಾಗ ಪರಿಣತರು ಹಾಗೂ ಕಾಳಜಿ ಇರುವವರನ್ನು ಆಯ್ಕೆ ಮಾಡಬೇಕು. ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ನೀಡಿ ಸಂಪನ್ಮೂಲ ಸಂಗ್ರಹಿಸಬೇಕು. ಶಿರಸಿ, ಬೆಳಗಾವಿ, ಹಾಸನ, ಚಾಮರಾಜನಗರ, ಮಡಿಕೇರಿ, ಗದಗ ನಗರಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಕಾಮಗಾರಿ ಆರಂಭಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು. 

ಬೆಂಗಳೂರು ನಗರದ ಹೊರವಲಯದಲ್ಲಿ ₹100 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರಿ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದಕ್ಕಾಗಿ 25 ಎಕರೆ ಜಾಗ ಒದಗಿಸಬೇಕು ಎಂದರು.

ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT