ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗದಲ್ಲಿ ಮೋದಿ ಪ್ರಚಾರ: ಈಶ್ವರಪ್ಪ ಗೈರು, ಕುಮಾರ್ ಬಂಗಾರಪ್ಪ ಹಾಜರು

Published 18 ಮಾರ್ಚ್ 2024, 23:06 IST
Last Updated 18 ಮಾರ್ಚ್ 2024, 23:06 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್‌ ಸಮಾವೇಶದ ಮೂಲಕ ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಪಕ್ಷದ ಪರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿದರು.

ನರೇಂದ್ರ ಮೋದಿ ಭಾಷಣ ಆಲಿಸಲು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು–ಉಡುಪಿ ಕ್ಷೇತ್ರಗಳಿಂದ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಬಂದಿದ್ದರು. ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು.ಭದ್ರತೆಯ ಕಾರಣಕ್ಕೆ ಜನರು ಮಧ್ಯಾಹ್ನ 12 ಗಂಟೆಗೆ ಮುನ್ನವೇ ವೇದಿಕೆ ಎದುರು ಆಸೀನರಾಗಿದ್ದರು.

ಆದರೆ ಪ್ರಧಾನಿ ವೇದಿಕೆಗೆ ಬಂದಾಗ ಮಧ್ಯಾಹ್ನ ಮೂರೂವರೆ ಆಗಿತ್ತು. ಚುನಾವಣೆ ನೀತಿ–ಸಂಹಿತೆಯ ಕಾರಣಕ್ಕೆ ಸಂಘಟಕರು ಊಟದ ವ್ಯವಸ್ಥೆ ಮಾಡಿರಲಿಲ್ಲ. ಮೂರೂವರೆ ಗಂಟೆ ಕಾದು ಕುಳಿತಿದ್ದ ಜನರು ಮಜ್ಜಿಗೆ, ನೀರು ಕುಡಿಯುತ್ತಾ ಮೋದಿ ಭಾಷಣ ಆಲಿಸಿದರು.

ಜನರ ಮಧ್ಯದಿಂದ ವೇದಿಕೆಗೆ

ವಿಮಾನ ನಿಲ್ದಾಣದಿಂದ ಅಲ್ಲಮ‍ಪ್ರಭು ಮೈದಾನಕ್ಕೆ ಬಂದ ನರೇಂದ್ರ ಮೋದಿ, ಸಭಿಕರ ನಡುವಿನಿಂದಲೇ ತೆರೆದ ವಾಹನದಲ್ಲಿ ವೇದಿಕೆಗೆ ಬಂದು ಗಮನ
ಸೆಳೆದರು. 

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತೆರೆದ ವಾಹನದಲ್ಲಿ ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಜನರಿಗೆ ಕೈಮುಗಿದರು. ಈ ವೇಳೆ ‘ಮೋದಿ’, ‘ಮೋದಿ‌’ ಘೋಷಣೆ ಜೋರಾಗಿ ಕೇಳಿ ಬಂತು. ಕೇಸರಿ ಶಾಲು, ಟೋಪಿ ಬೀಸಿ ಜನರು ಪ್ರಧಾನಿಯತ್ತ ಅಭಿಮಾನ ತೋರಿದರು.

ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟಕರು ಅವರಿಗೆ ವಿಐಪಿ ಪಾಸ್‌ ನೀಡಿದ್ದರು. ನವ ಮತದಾರರು ಪ್ರಧಾನಿಯನ್ನು ಹತ್ತಿರದಿಂದ ನೋಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಮೊದಲ ಬಾರಿಗೆ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಮಂಜುನಾಥ್ ಅವರನ್ನು ಗೆಲ್ಲಿಸುವಂತೆ ನರೇಂದ್ರ ಮೋದಿ ಮನವಿ ಮಾಡಿದರು.

ಚಿತ್ರದುರ್ಗ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವೇದಿಕೆಯಲ್ಲಿದ್ದರು. ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳ್ಳದಿದ್ದರೂ ವೇದಿಕೆಯ ಪರದೆಯಲ್ಲಿ ಪ್ರದರ್ಶಿಸಿದ ಐದು ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಭಾವಚಿತ್ರದಲ್ಲಿ ನಾರಾಯಣಸ್ವಾಮಿ ಚಿತ್ರವೂ ಇತ್ತು. ಆದರೆ ಅಭ್ಯರ್ಥಿಗಳನ್ನು ಪರಿಚಯಿಸುವಾಗ ಮೋದಿ ಅವರು ನಾರಾಯಣಸ್ವಾಮಿ ಅವರ ಹೆಸರು ಹೇಳಲಿಲ್ಲ.

ಈಶ್ವರಪ್ಪ ಗೈರು, ಕುಮಾರ್ ಹಾಜರು

ಹಾವೇರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರ ಮನವೊಲಿಸಲು ಈ ಸಮಾವೇಶ ವೇದಿಕೆ ಆಗಲಿದೆ ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು.

ಪ್ರಧಾನಿ ಕಾರ್ಯಕ್ರಮದಿಂದ ಕೆ.ಎಸ್‌.ಈಶ್ವರಪ್ಪ ದೂರ ಉಳಿದರು. ಇಡೀ ದಿನ ಶಿವಮೊಗ್ಗ ಜಿಲ್ಲೆಯ ವೀರಶೈವ–ಲಿಂಗಾಯತ ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಪಕ್ಷದ ವೇದಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ, 10 ತಿಂಗಳ ನಂತರ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಮಾರಂಭದಲ್ಲಿ ಸೇರಿದ್ದವರು ಕುಮಾರ್ ಅವರಿಗೆ ಭಾರಿ ಶಿಳ್ಳೆ–ಚಪ್ಪಾಳೆಯ ಸ್ವಾಗತ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT