ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬೊಮ್ಮಾಯಿ ಸೂಚನೆ: ನಂದಿನಿ ಹಾಲಿನ ದರ ಹೆಚ್ಚಳಕ್ಕೆ ತಾತ್ಕಾಲಿಕ ತಡೆ

Last Updated 14 ನವೆಂಬರ್ 2022, 17:21 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಬ್ರ್ಯಾಂಡ್‌ನ ಎಲ್ಲ ಮಾದರಿಯ ಹಾಲು ಮತ್ತು ಮೊಸರಿನ ದರವನ್ನು ಮಂಗಳವಾರದಿಂದಲೇ ಪ್ರತಿ ಲೀಟರ್‌ಗೆ ₹ 3ರಷ್ಟು ಹೆಚ್ಚಳ ಮಾಡಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಕೈಗೊಂಡಿದ್ದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ತಡೆ ಹಿಡಿಯಲಾಗಿದೆ.

ಹಾಲಿನ ದರ ಹೆಚ್ಚಿಸುವ ಪ್ರಸ್ತಾವಕ್ಕೆ ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಮಂಗಳವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೋಮವಾರ ಪ್ರಕಟಿಸಿದ್ದರು. ಹೆಚ್ಚಳದ ಪೂರ್ಣ ಮೊತ್ತವನ್ನು ರೈತರಿಗೆ ವರ್ಗಾಯಿಸುವ ಘೋಷಣೆಯನ್ನೂ ಮಾಡಿದ್ದರು.

ಕಲಬುರಗಿ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ, ಹಾಲಿನ ದರ ಏರಿಕೆ ಕುರಿತು ಇದೇ 20ರಂದು ಕೆಎಂಎಫ್‌ ಅಧ್ಯಕ್ಷರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸೋಮವಾರ ಸಂಜೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಆ ಬಳಿಕ ಮಂಡಳಿ ಅಧ್ಯಕ್ಷರ ಜತೆಗೂ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಮುಖ್ಯಮಂತ್ರಿಯವರ ಮಧ್ಯ ಪ್ರವೇಶದ ನಂತರ ದರ ಹೆಚ್ಚಳದ ತೀರ್ಮಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ಎರಡು ವರ್ಷ ಹತ್ತು ತಿಂಗಳ ಹಿಂದೆ ನಂದಿನಿ ಹಾಲಿನ ಕನಿಷ್ಠ ಮಾರಾಟ ದರವನ್ನು ಪ್ರತಿ ಲೀ.ಗೆ ₹ 35ರಿಂದ ₹ 37ಕ್ಕೆ ಹೆಚ್ಚಿಸಲಾಗಿತ್ತು. ಆ ಬಳಿಕ ಈವರೆಗೂ ದರ ಹೆಚ್ಚಳ ಮಾಡಿಲ್ಲ. ಹೈನುಗಾರರ ಸಂಕಷ್ಟ ಹಾಗೂ ಎಲ್ಲ ಹಾಲು ಒಕ್ಕೂಟಗಳ ಮನವಿಗಳ ಕುರಿತು ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಆ ಬಳಿಕವೇ ದರ ಹೆಚ್ಚಳದ ನಿರ್ಧಾರ ಮಾಡಲಾಗಿದೆ ಎಂದು ಜಾರಕಿಹೊಳಿ ಹೇಳಿಕೆಯಲ್ಲಿ ತಿಳಿಸಿದ್ದರು.

‘ರೈತರಿಗೆ ನೆರವಾಗುವ ಉದ್ದೇಶ ದಿಂದ ಹಾಲು ಮತ್ತು ಮೊಸರಿನ ದರ ಹೆಚ್ಚಿಸಲಾಗಿದೆ. ಹೈನು ರಾಸುಗಳ ನಿರ್ವಹಣಾ ವೆಚ್ಚದಲ್ಲಿ ಎರಡು ವರ್ಷ ಗಳಿಂದ ನಿರಂತರ ಏರಿಕೆ ಆಗುತ್ತಿದೆ. ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಹತ್ತಿಕಾಳು ಹಿಂಡಿ, ಖನಿಜ ಪದಾರ್ಥಗಳ ಬೆಲೆ ಯಲ್ಲಿ ಶೇಕಡ 30ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ಪ್ರತಿ ಕೆ.ಜಿ. ಪಶು ಆಹಾರ ಉತ್ಪಾದನೆಯ ವೆಚ್ಚವು ಎರಡು ವರ್ಷದ ಹಿಂದೆ ₹ 18 ಇತ್ತು. ಈಗ ₹ 23 ತಲುಪಿದೆ. ಇದು ಕೂಡ ಹಾಲಿನ ದರ ಏರಿಕೆಗೆ ಕಾರಣ’ ಎಂದು ಹೇಳಿದರು.

ಹಾಲಿನ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಾಗಿರುವ ದೊಡ್ಲ, ಜೆರ್ಸಿ, ಹೆರಿಟೇಜ್‌, ತಿರುಮಲ, ಗೋವರ್ಧನ್‌, ಆರೋಗ್ಯ ಬ್ರ್ಯಾಂಡ್‌ ದರಕ್ಕೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆ ಇದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ, ಗುಜರಾತ್‌ ಹಾಲು ಉತ್ಪಾದಕರ ಮಹಾಮಂಡಳಗಳ ಹಾಲಿನ ದರವು ಕೆಎಂಎಫ್‌ ದರಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದ್ದರು.

‘ಹಾಲು ಉತ್ಪಾದನೆ ಇಳಿಕೆ’
‘ಪ್ರಸಕ್ತ ವರ್ಷದ ಜೂನ್‌ ಅಂತ್ಯದಲ್ಲಿ ಕೆಎಂಎಫ್‌ ಪ್ರತಿದಿನ 94.20 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿತ್ತು. ಚರ್ಮ ಗಂಟು ರೋಗ, ಅತಿವೃಷ್ಟಿ ಮತ್ತಿತರ ಕಾರಣಗಳಿಂದ ಹಾಲು ಉತ್ಪಾದನೆಯಲ್ಲಿ ಕುಸಿತವಾಗಿದೆ. ಈಗ ಹಾಲು ಸಂಗ್ರಹಣೆಯ ಪ್ರಮಾಣ 78.80 ಲಕ್ಷ ಲೀ.ಗೆ ಇಳಿಕೆಯಾಗಿದೆ. ಹೈನುಗಾರಿಕೆಯಲ್ಲಿ ಲಾಭ ದೊರಕುತ್ತಿಲ್ಲ ಎಂಬ ಕಾರಣದಿಂದ ರೈತರು ಹೊರ ರಾಜ್ಯಗಳಿಗೆ ರಾಸುಗಳನ್ನು ಮಾರಾಟ ಮಾಡುತ್ತಿರುವುದೂ ಹೆಚ್ಚುತ್ತಿದೆ’ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT