ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.1ರಿಂದ ಹೊಸ ಸೌಲಭ್ಯ: ಆಸ್ತಿ ನೋಂದಣಿಗೆ 20 ನಿಮಿಷ!

ಉಪ ನೋಂದಣಾಧಿಕಾರಿ ಕಚೇರಿಗೆ ಹೊಸ ಸ್ಪರ್ಶ
Last Updated 16 ಆಗಸ್ಟ್ 2022, 20:21 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ನೋಂದಣಿ ಮಾಡಿಸುವಲ್ಲಿ ಇರುವ ಅಡೆತಡೆಗಳನ್ನು ಶಾಶ್ವತವಾಗಿ ಪರಿಹರಿಸಲು ಮುಂದಾಗಿರುವ ಸರ್ಕಾರ, ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಕಚೇರಿ ಮಾದರಿಯ ಸೇವೆ ಒದಗಿಸುವತ್ತ ಹೆಜ್ಜೆ ಇಟ್ಟಿದೆ.

ಆಸ್ತಿಗಳ ಸುಲಭ ನೋಂದಣಿಗಾಗಿ ವೆಬ್‌ ಆಧಾರಿತ ಕಾರ್ಯನಿರ್ವಹಣೆಯ ನಾಗರಿಕ ಸ್ನೇಹಿ ಕಾವೇರಿ–2ತಂತ್ರಾಂಶ ರೂಪಿಸಲಾಗಿದೆ. ನವೆಂಬರ್‌ 1ರಿಂದಲೇ ನಾಗರಿಕರು ತಮಗೆ ಅನುಕೂಲವಾಗುವ ನೋಂದಣಿ ದಿನ, ಸಮಯ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಚೇರಿಗೆ ಭೇಟಿ ನೀಡಿದ 20 ನಿಮಿಷದೊಳಗೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳ್ಳಲಿವೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೆಚ್ಚುವರಿ ಆಯುಕ್ತ ಎಚ್‌.ಎಲ್‌.ಪ್ರಭಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇದುವರೆಗೂ ನೋಂದಣಿ ಬಯಸುವವರು ಎಲ್ಲ ದಾಖಲೆಗಳನ್ನು ನೀಡಿ, ಮುದ್ರಾಂಕ, ನೋಂದಣಿ ಶುಲ್ಕಗಳನ್ನು ಭರಿಸಿದ ನಂತರ ದಿನ, ಸಮಯಕ್ಕಾಗಿ ವಾರಗಟ್ಟಲೆ ಕಾಯಬೇಕಿತ್ತು. ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ನೀಡಿದ ಟೋಕನ್‌ ಆಧಾರದಲ್ಲಿ ನೋಂದಣಿ ಮಾಡಿಸಬೇಕಿತ್ತು. ನಿಗದಿತ ಸಮಯಕ್ಕೆ ಹೋದರೂ ತಾಂತ್ರಿಕ ಸಮಸ್ಯೆಗಳಿಂದ ಕಾಯುವುದು ಮಾತ್ರ ತಪ್ಪುತ್ತಿರಲಿಲ್ಲ. ಇಂತಹ ಸಮಸ್ಯೆಗಳಿಗೆ ಕಾವೇರಿ–2 ತಂತ್ರಾಂಶ ಪರಿಹಾರ ದೊರಕಿಸಲಿದೆ.

ಆಸ್ತಿಯ ದಾಖಲೆಗಳ ದತ್ತಾಂಶವನ್ನು ಮನೆಯಲ್ಲೇ ಕುಳಿತು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬಹುದು. ಶುಲ್ಕವನ್ನು ಲೆಕ್ಕ ಹಾಕಿಕೊಳ್ಳಬಹುದು. ಪ್ರತಿ ಹಂತದಲ್ಲೂ ಮೊಬೈಲ್‌ ಸಂದೇಶ ರವಾನಿಸಲಾಗುತ್ತದೆ. ಋಣಭಾರ ಪ್ರಮಾಣಪತ್ರ ಮತ್ತು ದೃಢೀಕೃತ ನಕಲುಗಳನ್ನು ಮೊಬೈಲ್‌ ಮೂಲಕವೇ ಪಡೆಯಬಹುದು. ನೋಂದಣಿ ದತ್ತಾಂಶಗಳನ್ನು ರಾಜ್ಯ ದತ್ತಾಂಶ ಕೋಶದಲ್ಲಿ ಸಂಗ್ರಹಣೆ ಮಾಡಲಾಗುತ್ತದೆ.

ಪ್ರತಿ ಹಂತದ ಅಧಿಕಾರಿ, ಸಿಬ್ಬಂದಿಗೂ ಜವಾಬ್ದಾರಿ ನಿಗದಿ ಮಾಡಲಾಗಿದ್ದು, ತಪ್ಪಿತಸ್ಥರನ್ನು ಸುಲಭವಾಗಿ ಗುರುತಿಸಿ ಹೊಣೆಗಾರರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ದತ್ತಾಂಶಗಳ ಸುರಕ್ಷತೆಗೆ ಒತ್ತು ನೀಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯ ಜತೆಗೆ, ಜಿಲ್ಲಾ, ಕೇಂದ್ರ ಕಚೇರಿಗಳ ಕಾರ್ಯ ವಿಧಾನಗಳೂ ಸುಗಮವಾಗಲಿವೆ ಎಂದೂ ಅವರು ವಿವರ ನೀಡಿದ್ದಾರೆ.

ದತ್ತಾಂಶಗಳ ವಿಶ್ಲೇಷಣೆಗೆ ಅವಕಾಶ:ತಾಂತ್ರಿಕ ದೋಷ ರಹಿತ ಈ ವ್ಯವಸ್ಥೆಯಲ್ಲಿ ನೋಂದಣಿ ದತ್ತಾಂಶಗಳನ್ನು ವಿಶ್ಲೇಷಿಸಲು ಅವಕಾಶವಿದೆ. ಪ್ರತಿ ದಿನ ಸಂಗ್ರಹವಾಗುವ ಶುಲ್ಕಗಳ ಅಂಕಿ–ಅಂಶಗಳು ದಿನದ ಕೊನೆಗೆ ಲಭ್ಯವಾಗುತ್ತವೆ. ಯಾವ ವಯಸ್ಸಿನವರು ಎಷ್ಟು ಆಸ್ತಿ ನೋಂದಣಿ ಮಾಡಿಸಿದ್ದಾರೆ. ಮಹಿಳೆಯರು, ಪುರುಷರು ಎಷ್ಟು? ರಿಯಲ್‌ ಎಸ್ಟೇಟ್‌ ಉದ್ಯಮದ ಬೆಳವಣಿಗೆ ರಾಜ್ಯದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಎಂಬ ಹಲವು ಸಂಗತಿಗಳ ನಿಖರ ದತ್ತಾಂಶಗಳು ದೊರೆಯುತ್ತವೆ.

ಚಿಂಚೋಳಿಯಲ್ಲಿ ಮೊದಲ ಪ್ರಯೋಗ:ರಾಜ್ಯ ಸರ್ಕಾರದ ಇ–ಆಡಳಿತ ಇಲಾಖೆಯ ಅಧೀನ ಸಂಸ್ಥೆ ‘ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನೆನ್ಸ್’ ಸಂಸ್ಥೆ ಅಭಿವೃದ್ಧಿಪಡಿಸಿದ ಕಾವೇರಿ– 2 ತಂತ್ರಾಂಶವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ನೋಂದಣಾಧಿಕಾರಿ ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯೋತ್ಸವದ ದಿನ ರಾಜ್ಯದ ಎಲ್ಲ ಕಚೇರಿಗಳಲ್ಲೂ ಈ ಸೇವೆ ಲಭ್ಯವಾಗಲಿದೆ.

*

ಹೊಸ ತಂತ್ರಾಂಶದಿಂದ ವಿಳಂಬ, ಕಾಯುವಿಕೆ ಕೊನೆಗೊಳ್ಳಲಿದೆ. ಆಸ್ತಿ ನೋಂದಣಿಯಲ್ಲಿ ಆಗುವ ಅಕ್ರಮ, ವಂಚನೆಗಳಿಗೂ ಕಡಿವಾಣ ಬೀಳಲಿದೆ.
-ಎಚ್‌.ಎಲ್‌. ಪ್ರಭಾಕರ್, ನೋಂದಣಿ ಮತ್ತು ಮುದ್ರಾಂಕಗಳ ಹೆಚ್ಚುವರಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT