ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂತರಾಜ ವರದಿಗೆ ವಿರೋಧವಿಲ್ಲ, ಸರಿಪಡಿಸಲಷ್ಟೇ ಕೋರಿಕೆ: ಸಚಿವ ಎಂ.ಬಿ. ಪಾಟೀಲ

Published 8 ಜನವರಿ 2024, 16:09 IST
Last Updated 8 ಜನವರಿ 2024, 16:09 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಗೆ ನಮ್ಮ ವಿರೋಧವೇನೂ ಇಲ್ಲ. ಆದರೆ, ಅದನ್ನು ಸ್ವಲ್ಪ ಮಟ್ಟಿಗೆ ಸರಿಪಡಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಕೇಳಿಕೊಂಡಿದ್ದೇವೆ’ ಎಂದು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರೂ ಆಗಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.

ಹಿಂದುಳಿದ ವರ್ಗಗಳ ಸ್ವಾಮೀಜಿಗಳ ತಂಡವೊಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕಾಂತರಾಜ ವರದಿ ಸ್ವೀಕರಿಸಲು ಆಗ್ರಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈಗಿನ ನಿಯಮಗಳ ಪ್ರಕಾರ, ಜಾತಿ ನಮೂದಿಸುವಾಗ ಲಿಂಗಾಯತ ಉಪ ಪಂಗಡಗಳ ಹೆಸರನ್ನು ನಮೂದಿಸಿದರೆ ಸಮುದಾಯದ ಉಪಪಂಗಡಗಳಿಗೆ ಸೇರಿದವರಿಗೆ ಮೀಸಲಾತಿ ಸಿಗುವುದಿಲ್ಲ. ಆದ್ದರಿಂದ, ಸಮುದಾಯಕ್ಕೆ ಸೇರಿದವರು ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡದ ಹೆಸರು ಹಾಕುತ್ತಿಲ್ಲ. ಅದನ್ನು ಸರಿಪಡಿಸಿದರೆ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾದಾಗ, ಲಿಂಗಾಯತ ಸಮುದಾಯದ ಜನಸಂಖ್ಯೆ ಶೇ 22ರವರೆಗೆ ಹೆಚ್ಚಾಗುವ ಸಂಭವವಿದೆ’ ಎಂದು ವಿವರಿಸಿದರು.

ರಹೀಂಖಾನ್‌ ಹೇಳಿಕೆ ತಪ್ಪೇನಿದೆ: 

‘ರಹೀಂ ಖಾನ್ ಅವರು ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ಕೇಳಿರುವುದರಲ್ಲಿ ತಪ್ಪೇನಿದೆ’ ಎಂದು ಪಾಟೀಲ ಹೇಳಿದರು.

‘ಉಪ ಮುಖ್ಯಮಂತ್ರಿ ಮಾಡಬೇಕೋ ಬೇಡವೋ? ಎಷ್ಟು ಮಾಡಬೇಕು? ಯಾವೆಲ್ಲ ವರ್ಗಕ್ಕೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಹಿಂದೆ ಒಂದೇ ಉಪ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನಿಸಿದ್ದರು. ಈಗ ಕೆಲವು ಬೇಡಿಕೆಗಳನ್ನು ನಾನು ಕೂಡ ಗಮನಿಸಿದ್ದೇನೆ. ನನ್ನ ಅಭಿಪ್ರಾಯವನ್ನು ಪಕ್ಷದ ನಾಲ್ಕು ಗೋಡೆ ಮಧ್ಯೆ ಹೇಳುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT