ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆ: ಏ.29ಕ್ಕೆ ಪರಿಹಾರ

Published 28 ಏಪ್ರಿಲ್ 2024, 1:04 IST
Last Updated 28 ಏಪ್ರಿಲ್ 2024, 1:04 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿದ್ದರಿಂದ ಉಂಟಾಗಿರುವ ಬಿಕ್ಕಟ್ಟಿಗೆ ಉನ್ನತ ಶಿಕ್ಷಣ ಇಲಾಖೆ ಸೋಮವಾರ (ಏ. 29) ಪರಿಹಾರ ಪ್ರಕಟಿಸಲಿದೆ.

ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಎಷ್ಟು ಸೇರಿವೆ ಎನ್ನುವ ಮಾಹಿತಿ ನೀಡಲು ಆಯಾ ವಿಷಯವಾರು ತಲಾ ಮೂವರು ತಜ್ಞರನ್ನು ಒಳಗೊಂಡ ನಾಲ್ಕು ಸಮಿತಿಗಳನ್ನು ರಚಿಸಿ ಇದೇ ಏ. 22ರಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಅತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ಆಕ್ಷೇಪಣೆಗಳನ್ನು ಸಲ್ಲಿಸಲು ಏ. 27ರವರೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿತ್ತು. ಸಮಿತಿ ವರದಿ ಹಾಗೂ ವಿದ್ಯಾರ್ಥಿಗಳ ಆಕ್ಷೇಪಣೆಗಳನ್ನು ಪರಿಗಣಿಸಿ ನಿರ್ಧಾರ ಪ್ರಕಟಿಸಲಾಗುತ್ತಿದೆ. 

ಪ್ರತಿ ಪತ್ರಿಕೆಯೂ 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎಷ್ಟು ಪ್ರಶ್ನೆಗಳು ಪಠ್ಯಕ್ಕೆ ಹೊರತಾಗಿವೆಯೋ ಅಷ್ಟು ಕೃಪಾಂಕ ನೀಡಬಹುದು. ಹಾಗೆ ನೀಡಿದರೆ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಪಿಯು ಅಂಕಗಳನ್ನಷ್ಟೇ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಿದರೆ ಸಿಇಟಿ ಉದ್ದೇಶ, ಮಾಡಿದ ಖರ್ಚು ವ್ಯರ್ಥವಾಗುತ್ತದೆ. ಹಾಗಾಗಿ, ಮರು ಪರೀಕ್ಷೆ ನಡೆಸುವ ಅಥವಾ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನಷ್ಟೇ ಮೌಲ್ಯಮಾಪನ ಮಾಡಿ ಶೇ 100ಕ್ಕೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ಕೆಇಎ ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

‘ಯಾವ ತೀರ್ಮಾನ ತೆಗೆದುಕೊಂಡರೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ವಿದ್ಯಾರ್ಥಿಗಳು ಇನ್ನೂ ನೀಟ್‌ ಮತ್ತಿತರ ಪರೀಕ್ಷೆಗಳಿಗೆ ಓದುತ್ತಿರುವ ಕಾರಣ ಮರು ಪರೀಕ್ಷೆ ನಡೆಸಿದರೆ ಸೂಕ್ತ ಎನ್ನುವುದು ಬಹುತೇಕ ತಜ್ಞರ ಅನಿಸಿಕೆ. ಈ ಎಲ್ಲ ವಿಷಯಗಳನ್ನೂ ಪರಿಗಣಿಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ಏ. 18 ಮತ್ತು 19ರಂದು ನಡೆಸಿತ್ತು. ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಕ್ಕೆ ಹೊರತಾದ ಶೇ 25ರಷ್ಟು ಪ್ರಶ್ನೆಗಳು ಸೇರಿಕೊಂಡಿವೆ ಎಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. 

‘ಕೆಇಎಗೆ ಸಲ್ಲಿಕೆಯಾದ ಆಕ್ಷೇಪಣೆಗಳು ಹಾಗೂ ನಾಲ್ಕು ಸಮಿತಿಗಳ ವರದಿ ಆಧಾರದ ಮೇಲೆ ತಜ್ಞರು, ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಏ. 29ರಂದು ಪರಿಹಾರ ಪ್ರಕಟಿಸಲಾಗುವುದು’ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಶ್ರೀಕರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT